ನಟಿ ಸುಧಾ ಚಂದ್ರನ್ಗೆ ಏರ್ಪೋರ್ಟ್ನಲ್ಲಿ ಅವಮಾನ; ಕ್ಷಮೆ ಕೇಳಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)
CISF: ವಿಮಾನ ನಿಲ್ದಾಣದಲ್ಲಿ ಆಗುತ್ತಿರುವ ಸಮಸ್ಯೆಯ ಕುರಿತಂತೆ ಖ್ಯಾತ ನಟಿ, ನೃತ್ಯ ಪಟು ಸುಧಾ ಚಂದ್ರನ್ ಅವರ ಮನವಿಗೆ ಸಿಐಎಸ್ಎಫ್ ಸ್ಪಂದಿಸಿದೆ. ಅಲ್ಲದೇ ಸುಧಾ ಅವರಿಗಾದ ಅವಮಾನಕ್ಕೆ ಕ್ಷಮೆಯನ್ನೂ ಕೋರಿದೆ.
ವಿಮಾನ ನಿಲ್ದಾಣಗಳಲ್ಲಿ ತಮ್ಮ ಕೃತಕ ಕಾಲುಗಳನ್ನು ಬಿಚ್ಚಿ ಪ್ರತಿ ಬಾರಿ ತಪಾಸಣೆ ನಡೆಸಿ ಸಮಸ್ಯೆ ನೀಡುತ್ತಿರುವ ಕುರಿತು ಖ್ಯಾತ ನಟಿ, ನೃತ್ಯಪಟು ಸುಧಾ ಚಂದ್ರನ್ ವಿಡಿಯೋ ಮೂಲಕ ಬೇಸರ ಹೊರಹಾಕಿದ್ದರು. ಆ ವಿಡಿಯೋ ಮುಖಾಂತರ ಅವರು ನೇರವಾಗಿ ಪ್ರಧಾನಿಗೆ ಮನವಿ ಮಾಡಿದ್ದರು. ಇದೀಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ವಿಮಾನ ನಿಲ್ದಾಣದಲ್ಲಿ ಅವರಿಗಾದ ಅವಮಾನಕ್ಕೆ ಕ್ಷಮೆ ಯಾಚಿಸಿದೆ. ಸಾಮಾಜಿಕ ಜಾಲತಾಣದ ಮುಖಾಂತರ ಸಿಐಎಸ್ಎಫ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಮಹಿಳಾ ಅಧಿಕಾರಿ ಸುಧಾ ಅವರಿಗೆ ಕೃತಕ ಕಾಲನ್ನು ಬಿಚ್ಚಿಸಿ ತಪಾಸಣೆ ನಡೆಸಿದ ಕಾರಣವನ್ನು ಪರಿಶೀಲಿಸಲಾಗುವುದು’ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ವಿಡಿಯೋ ಹಂಚಿಕೊಂಡಿದ್ದ ಪೋಸ್ಟ್ಗೆ, ಸಿಐಎಸ್ಎಫ್ ಪ್ರತಿಕ್ರಿಯೆ ನೀಡುತ್ತಾ, ‘ಸುಧಾ ಚಂದ್ರನ್ ಅವರಿಗಾಗಿರುವ ಸಮಸ್ಯೆಗೆ ವಿಷಾದಿಸುತ್ತೇವೆ. ತಪಾಸಣೆಯ ಸಮಯದಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೃತಕ ಕಾಲನ್ನು ಬಿಚ್ಚಿ ಪರಿಶೀಲಿಸಲಾಗುತ್ತದೆ. ಈ ಪ್ರಕರಣದಲ್ಲಿ ಮಹಿಳಾ ಅಧಿಕಾರಿ ಕಾಲನ್ನು ಬಿಚ್ಚಿಸಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮೆಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ನಿಯಮಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಸುಧಾ ಚಂದ್ರನ್ ಅವರಿಗೆ ಭರವಸೆ ನೀಡುತ್ತೇವೆ. ಈ ಮೂಲಕ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಸಿಐಎಸ್ಎಫ್ ತಿಳಿಸಿದೆ.
ಸುಧಾ ಚಂದ್ರನ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಏನಾಗಿತ್ತು? ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ದೃಷ್ಟಿಯಿಂದ ಪ್ರತಿ ಬಾರಿ ಕೃತಕ ಕಾಲನ್ನು ಬಿಚ್ಚಲು ಹೇಳುತ್ತಾರೆ. ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಬಳಸಿ ಪರಿಶೀಲಿಸಿ ಎಂದು ಮನವಿ ಮಾಡಿದರೂ ಕೇಳುವುದಿಲ್ಲ. ಇದರಿಂದ ಬಹಳ ನೋವಾಗುತ್ತದೆ ಎಂದು ವಿಡಿಯೋ ಮುಖಾಂತರ ಸುಧಾ ಚಂದ್ರನ್ ಹೇಳಿದ್ದರು. ಅಲ್ಲದೇ ತಮ್ಮ ಸಮಸ್ಯೆಯನ್ನು ಪ್ರಧಾನಿಯವರ ಗಮನಕ್ಕೂ ತರುವ ಯತ್ನ ನಡೆಸಿದ್ದ ಸುಧಾ, ‘‘ನನಗಾಗುತ್ತಿರುವ ಸಮಸ್ಯೆ ಮಾನವೀಯ ದೃಷ್ಟಿಯಿಂದ ಸಾಧುವೇ? ಇದೇ ದೇಶವೇ ನನ್ನ ಸಾಧನೆಯ ಬಗ್ಗೆ ಕೊಂಡಾಡಿದ್ದು? ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಗೆ ನೀಡುವ ಗೌರವವೇ ಇದು? ಪ್ರಧಾನಿಯವರೇ ದಯವಿಟ್ಟು ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕ ಎಂಬ ಗುರುತಿನ ಚೀಟಿ ನೀಡಿ. ಇದು ನನ್ನ ವಿನಮ್ರ ಕೋರಿಕೆ’’ ಎಂದು ಕೋರಿಕೊಂಡಿದ್ದರು.
ಪ್ರತೀ ಬಾರಿ ಕೃತಕ ಕಾಲನ್ನು ಬಿಚ್ಚಿ ತೋರಿಸುವುದು ಸಂಪೂರ್ಣವಾಗಿ ನೋವುಂಟು ಮಾಡುತ್ತದೆ ಎಂದು ಅವರು ಬೇಸರ ಹೊರಹಾಕಿದ್ದರು. ತಮ್ಮ ಸಂದೇಶ ಕೇಂದ್ರದ ಅಧಿಕಾರಿಗಳಿಗೆ ತಲುಪಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಲಿ ಎಂದೂ ಅವರು ಆಶಿಸಿದ್ದರು. ಇದೀಗ ಸಿಐಎಸ್ಎಫ್ ಈ ಕುರಿತು ಪ್ರತಿ್ಕರಿಯಿಸಿದ್ದು, ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.
ಸುಧಾ ಚಂದ್ರನ್ ಅವರು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿಯಾಗಿದ್ದು, 2004ರಲ್ಲಿ ಅಪಘಾತವಾದ ನಂತರ ಕೃತಕ ಕಾಲುಗಳ ಮೂಲಕ ಸಾಧನೆ ಮಾಡಿ, ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದರು. ಪ್ರಸ್ತುತ ಅವರು ನೃತ್ಯ ಪಟುವಾಗಿ, ನಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿಯೂ ನಟಿಸಿದ್ದ ಸುಧಾ, 1988ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್ ನಟನೆಯ ‘ಒಲವಿನ ಆಸರೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:
ಯೂಟ್ಯೂಬರ್ಗಳ ಮೇಲೆ ಮಾನಹಾನಿ ಕೇಸ್ ಹಾಕಿದ್ದ ಸಮಂತಾಗೆ ಮುಖಭಂಗ; ಕೋರ್ಟ್ ಹೇಳಿದ್ದೇನು?