ದೇಶದ ಹೆಮ್ಮೆಯ ಈ ಕಲಾವಿದೆಗೆ ವಿಮಾನ ನಿಲ್ದಾಣಗಳಲ್ಲಿ ಪ್ರತಿ ಬಾರಿ ಎದುರಾಗುತ್ತಿದೆ ಸಮಸ್ಯೆ; ಪರಿಹಾರಕ್ಕೆ ಪ್ರಧಾನಿಗೆ ಮನವಿ

Sudha Chandran | PM Modi: ಖ್ಯಾತ ನಟಿ, ನೃತ್ಯ ಕಲಾವಿದೆ ಸುಧಾ ಚಂದ್ರನ್ ವಿಮಾನ ನಿಲ್ದಾಣಗಳಲ್ಲಿ ತಮಗಾಗುತ್ತಿರುವ ಸಮಸ್ಯೆಯ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ. ಅದರ ಮೂಲಕ ಅವರು ನೇರವಾಗಿ ಪ್ರಧಾನಿಗಳಲ್ಲಿ ಮನವಿ ಮಾಡಿದ್ದಾರೆ.

ದೇಶದ ಹೆಮ್ಮೆಯ ಈ ಕಲಾವಿದೆಗೆ ವಿಮಾನ ನಿಲ್ದಾಣಗಳಲ್ಲಿ ಪ್ರತಿ ಬಾರಿ ಎದುರಾಗುತ್ತಿದೆ ಸಮಸ್ಯೆ; ಪರಿಹಾರಕ್ಕೆ ಪ್ರಧಾನಿಗೆ ಮನವಿ
ಸುಧಾ ಚಂದ್ರನ್, ಪ್ರಧಾನಿ ಮೋದಿ (ಸಾಂದರ್ಭಿಕ ಚಿತ್ರ)

ಖ್ಯಾತ ನಟಿ, ನೃತ್ಯಪಟು ಸುಧಾ ಚಂದ್ರನ್ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ತಮಗಾಗುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೊತೆಗೆ ತಮ್ಮ ಸಮಸ್ಯೆಯನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮೂಡುವ ಮೂಲಕ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ. ಸುಧಾ ಅವರಿಗೆ ಈ ಹಿಂದೆ ಅಪಘಾತವಾಗಿ, ಕಾಲುಗಳನ್ನು ಕಳೆದುಕೊಂಡಿದ್ದರು. ಆದರೆ ಅವರು ಛಲ ಬಿಡದೇ ಕೃತಕ ಕಾಲುಗಳ ಮೂಲಕ ಅಭ್ಯಾಸ ಮಾಡಿ ನೃತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದರ ಮುಖಾಂತರ 56 ವರ್ಷದ ಸುಧಾ ಅವರು, ವಿಮಾನ ನಿಲ್ದಾಣಗಳಲ್ಲಿ ತಮಗಾಗುತ್ತಿರುವ ಸಮಸ್ಯೆಯ ಕುರಿತು ಹೇಳಿಕೊಂಡಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಉದ್ದೇಶದಿಂದ ಅವರ ಕೃತಕ ಕಾಲುಗಳನ್ನು ಪ್ರತಿ ಬಾರಿ ಬಿಚ್ಚಿ ತೋರಿಸಲು ಹೇಳುತ್ತಾರೆ. ಇದು ಬಹಳ ನೋವಾಗುತ್ತದೆ ಎಂದು ಸುಧಾ ಹೇಳಿಕೊಂಡಿದ್ದಾರೆ. ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಅವರು, ‘‘ಇದು ಅತ್ಯಂತ ವೈಯಕ್ತಿಕ ವಿಷಯವಾದರೂ, ಸರ್ಕಾರಕ್ಕೆ ಹಾಗೂ ನೆಚ್ಚಿನ ಪ್ರಧಾನಿಗಳ ಗಮನಕ್ಕೆ ತರುವ ಉದ್ದೇಶದಿಂದ ನಟಿ ಹಾಗೂ ನೃತ್ಯಪಟುವಾದ ನಾನು (ಸುಧಾ ರಾಮಚಂದ್ರನ್) ವಿಡಿಯೋ ಮಾಡುತ್ತಿದ್ದೇನೆ. ಕೃತಕ ಕಾಲುಗಳ ಮುಖಾಂತರ ನೃತ್ಯ ಮಾಡಿ ಇತಿಹಾಸ ಸೃಷ್ಟಿಸಿದ ನಾನು ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದೇನೆ. ಆದರೆ ನಾನು ಕಾರ್ಯದ ನಿಮಿತ್ತ ಪ್ರತಿ ಬಾರಿ ವಿಮಾನ ನಿಲ್ದಾಣಗಳಿಗೆ ತೆರಳಿದಾಗಲೂ ಭದ್ರತಾ ತಂಡದವರು ನಿಲ್ಲಿಸುತ್ತಾರೆ. ಅವರಿಗೆ ನನ್ನ ಕೃತಕ ಕಾಲುಗಳನ್ನು ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಮುಖಾಂತರ ಪರಿಶೀಲಿಸಿ ಎಂದು ಮನವಿ ಮಾಡಿಕೊಂಡರೂ, ಅವರು ಕೇಳದೇ- ಕೃತಕ ಕಾಲನ್ನು ತೆಗೆಸಿ ಪರಿಶೀಲಿಸುತ್ತಾರೆ’’ ಎಂದು ಸುಧಾ ಅವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ತಮ್ಮ ಸಮಸ್ಯೆಯನ್ನು ಪ್ರಧಾನಿಯವರ ಗಮನಕ್ಕೂ ತರುವ ಯತ್ನ ನಡೆಸಿರುವ ಸುಧಾ, ‘‘ನನಗಾಗುತ್ತಿರುವ ಸಮಸ್ಯೆ ಮಾನವೀಯ ದೃಷ್ಟಿಯಿಂದ ಸಾಧುವೇ? ಇದೇ ದೇಶವೇ ನನ್ನ ಸಾಧನೆಯ ಬಗ್ಗೆ ಕೊಂಡಾಡಿದ್ದು? ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಗೆ ನೀಡುವ ಗೌರವವೇ ಇದು? ಪ್ರಧಾನಿಯವರೇ ದಯವಿಟ್ಟು ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕ ಎಂಬ ಗುರುತಿನ ಚೀಟಿ ನೀಡಿ. ಇದು ನನ್ನ ವಿನಮ್ರ ಕೋರಿಕೆ’’ ಎಂದು ಸುಧಾ ಕೋರಿಕೊಂಡಿದ್ದಾರೆ.

ಪ್ರತೀ ಬಾರಿ ಕೃತಕ ಕಾಲನ್ನು ಬಿಚ್ಚಿ ತೋರಿಸುವುದು ಸಂಪೂರ್ಣವಾಗಿ ನೋವುಂಟು ಮಾಡುತ್ತಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ. ತನ್ನ ಸಂದೇಶ ಕೇಂದ್ರದ ಅಧಿಕಾರಿಗಳಿಗೆ ತಲುಪಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತಾಗಲಿ ಎಂದೂ ಅವರು ಆಶಿಸಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಸುಧಾ ಚಂದ್ರನ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

 

View this post on Instagram

 

A post shared by Sudhaa Chandran (@sudhaachandran)

ಖ್ಯಾತ ನಟ ಕರಣ್​ವೀರ್ ಬೋಹ್ರಾ ಸುಧಾ ಅವರ ಪೋಸ್ಟ್​ ಅನ್ನು ಮರುಹಂಚಿಕೊಂಡು ಬೆಂಬಲ ಸೂಚಿಸಿದ್ದಾರೆ. ಇಂತಹ ಅನಿವಾರ್ಯ ಸಂದರ್ಭಗಲ್ಲಿ ಪ್ರತ್ಯೇಕ ನಿಯಮವಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸುಧಾ ಅವರು ನಟಿಸಿರುವ ಅವರದ್ದೇ ಜೀವನಾಧಾರಿತವಾದ ‘ಮಯೂರಿ’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿಯೂ ನಟಿಸಿದ್ದ ಸುಧಾ, 1988ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್​ ನಟನೆಯ ‘ಒಲವಿನ ಆಸರೆ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂತಹ ಖ್ಯಾತ ನಟಿಗೆ ಆಗುತ್ತಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ನೆಟ್ಟಿಗರೂ ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಸಮಂತಾ ಪಾಲಿಗೆ ಇದು ಮಹತ್ವದ ದಿನ; ನಿರ್ಧಾರವಾಗಲಿದೆ ಹಲವರ ಭವಿಷ್ಯ

ಅಕ್ಕಿನೇನಿ ನಾಗಾರ್ಜುನಗೆ ಕಿಸ್ ಮಾಡೋಕೆ ದೊಡ್ಡ ಮೊತ್ತದ ಬೇಡಿಕೆ ಇಟ್ಟ ಅಮಲಾ ಪೌಲ್​

Click on your DTH Provider to Add TV9 Kannada