
ಒಂದಷ್ಟು ತಿಂಗಳ ಹಿಂದೆ ನಟಿ ಮಿಂಚು (Minchu) ಅವರು ವಿವಾದದ ಮೂಲಕ ಸುದ್ದಿ ಆಗಿದ್ದರು. ಆದರೆ ಈಗ ಅವರು ಆ ಘಟನೆಗಳಿಂದ ಹೊರಬಂದಿದ್ದಾರೆ. ಸಂಪೂರ್ಣ ಒಳ್ಳೆಯ ಕಾರಣಕ್ಕೆ ಅವರೀಗ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಈ ಮೊದಲು ರಿಯಾಲಿಟಿ ಶೋಗಳ (Reality Show) ಮೂಲಕವೇ ಮಿಂಚು ಅವರು ಗುರುತಿಸಿಕೊಂಡಿದ್ದರು. ಈಗ ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ತಾವೇ ಸ್ವತಃ ಒಂದು ಹೊಸ ರಿಯಾಲಿಟಿ ಶೋ ಆರಂಭಿಸುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ‘ಮಹಾನ್ ಕಿಲಾಡಿ’ (Mahan Khiladi) ಎಂದು ಟೈಟಲ್ ಇಡಲಾಗಿದೆ. ಆ ಬಗ್ಗೆ ಮಾಹಿತಿ ನೀಡಲು ಇತ್ತೀಚೆಗೆ ಸುದ್ದಿಗೋಷ್ಠಿ ಕರೆಯಲಾಗಿತ್ತು.
‘ಮಿಂಚು ಎಂಟರ್ಟೈನ್ಮೆಂಟ್ಸ್ ಯೂಟ್ಯೂಬ್’ ಮೂಲಕ ‘ಮಹಾನ್ ಕಿಲಾಡಿ’ ಶೋ ಪ್ರಸಾರವಾಗಲಿದೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್, ಟೈಟಲ್ ಸಾಂಗ್ ಹಾಗೂ ಟ್ರೇಲರ್ ಅನಾವರಣ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಟಿ. ಶರವಣ, ಉದ್ಯಮಿ ಡಾ. ಎನ್. ನರಸಿಂಹಮೂರ್ತಿ, ಶ್ರೀಕಾಂತ್, ಡಾ. ಮೋಕ್ಷಗುಂಡಂ ಗುರೂಜಿ, ಭಾರ್ಗವ ಅವರು ಸಾಕ್ಷಿಯಾದರು. ಈ ವೇಳೆ ಮಾತಾಡಿದ ಶರವಣ ಅವರು, ‘ಕಲಾವಿದರಿಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದೇನೆ. ಇಂಥವರು ಮುನ್ನೆಲೆಗೆ ಬರಬೇಕು. ನಿಮಗೆ ಸರ್ಕಾರದಿಂದಲೂ ಅನುದಾನ ಬರಲು ಶಿಪಾರಸ್ಸು ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ರಿಯಾಲಿಟಿ ಶೋ ಬಗ್ಗೆ ಮಿಂಚು ಅವರು ಮಾಹಿತಿ ಹಂಚಿಕೊಂಡರು. ‘ಒಂದಷ್ಟು ವಿಷಯಗಳಿಂದ ಅವಕಾಶಗಳು ಇಲ್ಲದೆ ಇರುವಾಗ ಹೊಸತನದೊಂದಿಗೆ ನನ್ನ ಅವಕಾಶವನ್ನು ನಾನೇ ರೂಪಿಸಿಕೊಳ್ಳಬೇಕು. ನಾನು ಕಲಿತದ್ದನ್ನು ಬೇರೆಯವರಿಗೆ ಹೇಳಿಕೊಡಬೇಕು ಎಂಬ ಕಲ್ಪನೆಯನ್ನು ಗೆಳಯ ಪ್ರವೀಣ್ ಗಸ್ತಿಗೆ ಹೇಳಿದಾಗ, ಆತ ಬೆನ್ನಲುಬಾಗಿ ನಿಂತುಕೊಂಡಿದ್ದರಿಂದ ಇಲ್ಲಿಯವರೆಗೂ ಬರಲು ಸಾಧ್ಯವಾಯಿತು’ ಎಂದು ಅವರು ಹೇಳಿದರು.
‘ಸಣ್ಣ ಬಜೆಟ್‌ನೊಂದಿಗೆ ಆರಂಭಿಸಿ, ಮುಂದೆ ದೊಡ್ಡದಾಗಿ ಬೆಳೆಯುತ್ತಾ ಹೋಯಿತು. ಅಕ್ಷರ ಸ್ಟುಡಿಯೋದ ಗೌರಿಪ್ರಸಾದ್ ಚಿತ್ರೀಕರಿಸಲು ಅನುವು ಮಾಡಿಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಕೊಟ್ಟಾಗ ಕರ್ನಾಟಕದಾದ್ಯಂತ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಬಂದರು. ಇದರಲ್ಲಿ 3 ಸಲ ಆಡಿಷನ್ ಮಾಡಿ, ಅಂತಿಮವಾಗಿ 22 ಪ್ರತಿಭೆಗಳು ಆಯ್ಕೆಯಾಗಿದ್ದಾರೆ. ಅವರಿಗೆಲ್ಲ 7 ವಾರಗಳ ತರಬೇತಿ ನೀಡಲಾಗಿದೆ’ ಎಂದಿದ್ದಾರೆ ಮಿಂಚು.
ಇದನ್ನೂ ಓದಿ: ಹೊಸ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬಂದ ಮೇಘನಾ ರಾಜ್
ಕಿರಣ್‌ಕುಮಾರ್ ಅವರು ಈ ರಿಯಾಲಿಟಿ ಶೋ ನಿರ್ದೇಶನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ದಿಲೀಪ್ ಕುಮಾರ್ ಹೆಚ್.ಆರ್. ಅವರು ಕ್ರಿಯೇಟೀವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುಟ್ಟರಾಜು ಡಿಜಿಟಲ್ ಪ್ರಮೋಟರ್ ಆಗಿದ್ದಾರೆ. ಚಿದಂಬರ ಪೂಜಾರಿ ಮೆಂಟರ್ ಆಗಿದ್ದು, ಪಲ್ಲವಿ ಸ್ಕ್ರಿಪ್ಟ್ ರೈಟರ್ ಆಗಿರುತ್ತಾರೆ. ಮಿಂಚು, ಮಹೇಶ್ ಕೃಷ್ಣ, ಪ್ರವೀಣ್ ಗಸ್ತಿ ತೀರ್ಪುಗಾರರಾಗಿರುತ್ತಾರೆ ಎಂಬ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ನೀಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.