
‘ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆ ಮಾಡಿರುವ ಕೆವಿಎನ್ ನಿರ್ಮಾಣ ಸಂಸ್ಥೆಯ ಮೇಲೆ ವಂಚನೆ ಆರೋಪ ಹೊರಿಸಲಾಗಿದೆ. ಕೆವಿಎನ್ ನಿರ್ಮಾಣ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿರುವ ಸಿನಿಮಾಗಳ ವ್ಯವಹಾರದಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಎದುರಾಗಿದ್ದು, ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ. ತಮಗೆ ಆಗಿರುವ ಮೋಸಕ್ಕೆ ಕೆವಿಎನ್ ಕಡೆಯಿಂದ ಎರಡು ಕೋಟಿ ರೂಪಾಯಿ ಪರಿಹಾರವನ್ನು ಕೊಡಿಸಬೇಕೆಂದು ಕೋರಲಾಗಿದೆ.
ಪದ್ಮಾವತಿ ಫಿಲಮ್ಸ್ ವತಿಯಿಂದ ದೂರು ದಾಖಲಾಗಿದ್ದು, ಇತ್ತೀಚೆಗೆ ಬಿಡುಗಡೆ ಆದ ‘ಬಲರಾಮನ ದಿನಗಳು’ ಸಿನಿಮಾಕ್ಕೆ ಸಂಬಂಧಿಸಿದಂತೆ ಈ ಆರೋಪ ಮಾಡಲಾಗಿದೆ. ಪದ್ಮಾವತಿ ಫಿಲಮ್ಸ್ ನಿರ್ಮಾಣ ಮಾಡಿದ್ದ ‘ಬಲರಾಮನ ದಿನಗಳು’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ನವರು ವಿತರಣೆ ಮಾಡಿದ್ದರು. ಆದರೆ ವಿತರಣೆಯ ಬಳಿಕ ಬಂದ ಲಾಭದ ಹಣವನ್ನು ನಿರ್ಮಾಪಕರಿಗೆ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಕೆವಿಎನ್ ಸಂಸ್ಥೆಯ ಕಡೆಯವರು ಎಂದು ಪರಿಚಯಿಸಿಕೊಂಡ ಸುಪ್ರೀತ್ ಎಂಬುವರು ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿರುತ್ತಾರೆ. ಖರೀದಿ ಮಾಡುವ ಸಮಯದಲ್ಲಿ ನಿರ್ಮಾಪಕರಿಗೆ ಯಾವುದೇ ಹಣ ನೀಡಿರುವುದಿಲ್ಲ. ಆ ಬಳಿಕ ಲೆಕ್ಕಾಚಾರದ ಬಗ್ಗೆ ಕೇಳಿದಾಗ 43 ಸಾವಿರಕ್ಕೂ ಹೆಚ್ಚು ಮೊತ್ತ ಗಳಿಕೆ ಆದರಷ್ಟೆ ಚಿತ್ರಮಂದಿರದವರು ಹಣ ಕೊಡುವುದಾಗಿ ಹೇಳಿದ್ದರು. ಆದರೆ ನಾವು (ನಿರ್ಮಾಣ ಸಂಸ್ಥೆಯ ವತಿಯಿಂದ) ವಿಚಾರಿಸಿದಾಗ ಚಿತ್ರಮಂದಿರಗಳವರು 50% ಶೇರು ನೀಡಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣವನ್ನು ನಮಗೆ ನೀಡಲಾಗಿಲ್ಲ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಯಶ್ ಕಾರಣಕ್ಕೆ ‘ಟಾಕ್ಸಿಕ್’ ಸೋತಿತೆ? ಸಹ ನಟ ಹೇಳಿದ್ದೇನು?
ಅಲ್ಲದೆ ವಿತರಣೆ ಹಕ್ಕು ಖರೀದಿ ಸಮಯದಲ್ಲಿ ‘ಬಲರಾಮನ ದಿನಗಳು’ ಸಿನಿಮಾದ ಒಟಿಟಿ ಮತ್ತು ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ತಾವೇ ಮಾಡಿಸಿಕೊಡುವುದಾಗಿ ಹೇಳಿದ್ದರು. ಆದರೆ ಆ ರೀತಿ ಯಾವುದೇ ಕಾರ್ಯವನ್ನು ಅವರು ಮಾಡಿಲ್ಲ. ನಮಗೆ ಬರಬೇಕಾದ ಹಣವನ್ನೂ ಕೊಟ್ಟಿಲ್ಲ. ಹಾಗೂ ಸಿನಿಮಾ ಅನ್ನು ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ಕೇವಲ ಅವರ ಹಿಡಿತ ಇರುವ ಚಿತ್ರಮಂದಿರದಲ್ಲಿ ಮಾತ್ರವೇ ಬಿಡುಗಡೆ ಮಾಡಿರುತ್ತಾರೆ’ ಎಂದಿದ್ದಾರೆ ನಿರ್ಮಾಪಕರು.
ಸಿನಿಮಾದ ಎಲ್ಲ ಪೋಸ್ಟರ್ಗಳಲ್ಲಿ ‘ಕೆವಿಎನ್ ವಿತರಣೆ’ ಎಂದು ಜಾಹೀರಾತು ನೀಡಿದ್ದರು. ಆದರೆ ‘ಬಲರಾಮನ ದಿನಗಳು’ ಸಿನಿಮಾದ ಎಲ್ಲ ವ್ಯವಹಾರ ನಡೆದಿರುವುದು ಎಸ್ಎಸ್ಎಸ್ ಎಂಟರ್ಪ್ರೈಸ್ ಹೆಸರಿನ ಸಂಸ್ಥೆಯ ಮೂಲಕ. ನಮಗೆ ನೀಡಲಾಗಿರುವ ಇನ್ವಾಯ್ಸ್ ಸಹ ಅದೇ ಸಂಸ್ಥೆಯಿಂದ ನೀಡಲಾಗಿದ್ದು, ಇದರಿಂದ ತೆರಿಗೆ ವಂಚನೆ ಸಹ ಆಗಿದೆ. ಈ ಬಗ್ಗೆ ನಿರ್ಮಾಪಕರ ಸಂಘವು ತನಿಖೆ ನಡೆಸಬೇಕು ಹಾಗೂ ನಮಗೆ ಆಗಿರುವ ನಷ್ಟಕ್ಕೆ ಕೆವಿಎನ್ ವತಿಯಿಂದ ಎರಡು ಕೋಟಿ ಪರಿಹಾರ ಕೊಡಿಸಬೇಕು ಎಂದು ಪದ್ಮಾವತಿ ಫಿಲಮ್ಸ್ನ ನಿರ್ಮಾಪಕರು ಒತ್ತಾಯಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ