ಟಾಲಿವುಡ್ ನಟನ ವಿರುದ್ಧ ಪ್ರೇಯಸಿಯಿಂದಲೇ ದೂರು
ಟಾಲಿವುಡ್ ನಟ ರಾಜ್ ತರುಣ್ ವಿರುದ್ಧ ಅವರ ಪ್ರೇಯಸಿಯೇ ದೂರು ನೀಡಿದ್ದಾರೆ. ರಾಜ್ ತರುಣ್ ಹಲವು ವರ್ಷಗಳಿಂದಲೂ ತಮ್ಮೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲ ಬಾಳ್ವೆ ಮಾಡಿದ್ದು ಈಗ ಬೇರೆ ನಟಿಗಾಗಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಟಾಲಿವುಡ್ನ ಜನಪ್ರಿಯ ಯುವ ನಟ ರಾಜ್ ತರುಣ್ ವಿರುದ್ಧ ಅವರ ಪ್ರೇಯಸಿಯೇ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಹತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ತೆಲುಗು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ, ತಕ್ಕ ಮಟ್ಟಿಗೆ ಅಭಿಮಾನಿ ವರ್ಗವನ್ನೂ ಸಹ ಹೊಂದಿರುವ ನಾಯಕ ನಟ ರಾಜ್ ತರುಣ್ ವಿರುದ್ಧ ಅವರ ಪ್ರೇಯಸಿಯೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ ತಮಗೆ ವಂಚಿಸಿದ್ದಾನೆಂದು ಆರೋಪ ಮಾಡಿದ್ದಾರೆ.
ನರಸಿಂಗಿ ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹೆಸರಿನ ಯುವತಿ ದೂರು ದಾಖಲಿಸಿದ್ದು, ತಮಗೆ ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಲಾವಣ್ಯ ಹಾಗೂ ರಾಜ್ ತರುಣ್ ಕಳೆದ 2012 ರಿಂದಲೂ ಪ್ರೀತಿಯಲ್ಲಿದ್ದು, 2014 ರಿಂದಲೂ ಒಂದೇ ಮನೆಯಲ್ಲಿ ಲಿವಿನ್ ಟುಗೆದರ್ ರಿಲೇಷನ್ನಲ್ಲಿದ್ದಾರೆ. ಆದರೆ ಇತ್ತೀಚೆಗೆ ರಾಜ್, ಮುಂಬೈ ಮೂಲದ ಹೊಸ ನಾಯಕ ನಟಿಯೊಟ್ಟಿಗೆ ಆಪ್ತತೆ ಹೆಚ್ಚಿಸಿಕೊಂಡಿದ್ದು ತಮ್ಮ ಸಂಬಂಧಕ್ಕೆ ಗೌರವ ನೀಡುತ್ತಿಲ್ಲ ಎಂದು ಯುವತಿ ಲಾವಣ್ಯ ಆರೋಪಿಸಿದ್ದಾರೆ.
ಲಾವಣ್ಯ ಹೇಳುತ್ತಿರುವಂತೆ ಇದೀಗ ಮುಂಬೈ ಮೂಲದ ನಟಿ, ಲಾವಣ್ಯಗೆ ಬೆದರಿಕೆಗಳನ್ನು ಹಾಕಿದ್ದು, ರಾಜ್ ತರುಣ್ ಇಂದ ದೂರ ಇರುವಂತೆ ಒತ್ತಾಯಿಸಿದ್ದಾರೆ. ಲಾವಣ್ಯಗೆ ನಟಿಯಿಂದ, ಆಕೆಯ ಸಹೋದರನಿಂದ ಬೆದರಿಕೆಗಳು ಬಂದಿವೆಯಂತೆ. ಕೆಲ ತಿಂಗಳ ಹಿಂದೆ ಸಹ ಲಾವಣ್ಯ, ರಾಜ್ ಅನ್ನು ಮದುವೆಯಾಗಲು ನಿಶ್ಚಯಿಸಿದ್ದರಂತೆ. ಆ ಸಮಯದಲ್ಲಿ ಆ ನಟಿಗೆ ಕರೆ ಮಾಡಿ ರಾಜ್ ಇಂದ ದೂರ ಇರುವಂತೆ ಬೇಡಿಕೊಂಡಿದ್ದಾಗಿಯೂ ಲಾವಣ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹಾಗೂ ರಾಜ್ ತರುಣ್ರ ಕೆಲ ಆಪ್ತ ಚಿತ್ರಗಳನ್ನು ಸಹ ನಟಿ ಪೊಲೀಸರೊಟ್ಟಿಗೆ ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ:ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಭೇಟಿಯಾದ ಟಾಲಿವುಡ್ ದಿಗ್ಗಜ ನಿರ್ಮಾಪಕರು
ರಾಜ್ ತರುಣ್ ಬಗ್ಗೆ ಆಗಾಗ್ಗೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ರಾಜ್, ಯುವತಿಯೊಟ್ಟಿಗೆ ಪ್ರೀತಿಯಲ್ಲಿದ್ದು ಆದಷ್ಟು ಬೇಗನೆ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಆ ಯುವತಿ ಯಾರು ಎಂಬುದು ಬಹಿರಂಗಗೊಂಡಿರಲಿಲ್ಲ. ರಾಜ್ ಹೆಸರು ಈ ಹಿಂದೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಅದಾದ ಬಳಿಕ ಅಪಘಾತ ಪ್ರಕರಣವೊಂದರಲ್ಲಿಯೂ ಕೇಳಿ ಬಂದಿತ್ತು. ಅಪಘಾತ ಮಾಡಿದ್ದ ರಾಜ್, ಅಲ್ಲಿಂದ ಕಾರು ಬಿಟ್ಟು ಓಡಿ ಹೋಗಿದ್ದರು. ಆ ವಿಡಿಯೋ ಮಾಧ್ಯಮಗಳಿಗೆ ಲಭ್ಯವಾಗಿತ್ತು.
ರಾಜ್ ತರುಣ್, ಕಳೆದ ಹತ್ತು ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ‘ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ಸಿನಿಮಾ ಚೂಪಿಸ್ತಾ ಮಾವ’, ‘ಪವರ್ ಪ್ಲೇ’, ‘ನಾ ಸಾಮಿ ರಂಗ’, ‘ಒರೇ ಬುಜ್ಜಿಗಾ’ ಇನ್ನೂ ಹಲವಾರು ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ‘ತಿರಗಬಡರಾ ಸ್ವಾಮಿ’ ಹೆಸರಿನ ಹೊಸ ಸಿನಿಮಾ ಪ್ರಾರಂಭಿಸಿದ್ದು ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ