ಗಾಲ್ವಾನ್ ಕುರಿತು ವಿವಾದಾತ್ಮಕ ಟ್ವೀಟ್; ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಟಿ ರಿಚಾ ಚಡ್ಡಾ

ಗಾಲ್ವಾನ್ ಕುರಿತ ತಮ್ಮ ಟ್ವೀಟ್​ನ್ನು ರಿಚಾ ಚಡ್ಡಾ ಅವರು ಡಿಲೀಟ್ ಮಾಡಿದ್ದಾರೆ. ಜೊತೆಗೆ ಮತ್ತೊಂದು ಟ್ವೀಟ್​ ಮಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಗಾಲ್ವಾನ್ ಕುರಿತು ವಿವಾದಾತ್ಮಕ ಟ್ವೀಟ್; ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಟಿ ರಿಚಾ ಚಡ್ಡಾ
Richa Chadha
TV9kannada Web Team

| Edited By: Rajesh Duggumane

Nov 25, 2022 | 7:14 AM

ಪಾಕ್​​ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ಸೇನಾ ಕಮಾಂಡರ್​ ಲೆಫ್ಟಿನೆಂಟ್​​​ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ವಿಚಾರವಾಗಿ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ಬಾಲಿವುಡ್​ ನಟಿ ರಿಚಾ ಚಡ್ಡಾ (Richa Chadha) ಟ್ವೀಟ್​ ಒಂದನ್ನು ಮಾಡಿದ್ದರು. “ಗಾಲ್ವಾನ್ ಹಾಯ್ ಎಂದು ಹೇಳುತ್ತಿದೆ ಎಂದು ನಟಿ ರಿಚಾ ಚಡ್ಡಾ ಟ್ವೀಟ್ ಮಾಡಿದ್ದರು. ಇದು ಅವಮಾನಕಾರಿ ಟ್ವೀಟ್ ಆಗಿದ್ದು, ಇದನ್ನು ಆದಷ್ಟು ಬೇಗ ಹಿಂಪಡೆಯಬೇಕು. ನಮ್ಮ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಸಮರ್ಥನೀಯವಲ್ಲ” ಎಂದು ಬಿಜೆಪಿಯ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದರು. ಭಾರತೀಯ ಸೇನೆಯನ್ನು (Indian Army) ಅವಮಾನಿಸಿದ್ದಾರೆ ಎಂದು ರಿಚಾ ಚಡ್ಡಾ ಭಾರೀ ಟೀಕೆಗೆ ಗುರಿಯಾಗಿದ್ದರು.

ರಿಚಾ ಚಡ್ಡಾ ಟ್ವೀಟ್​ಗೆ ನಟ ಅಕ್ಷಯ್​ ಕುಮಾರ್ ಕಿಡಿ

ರಿಚಾ ಚಡ್ಡಾ ಟ್ವೀಟ್ ಗಮನಿಸಿದ ನಟ ಅಕ್ಷಯ್​ ಕುಮಾರ್​ ಕೂಡ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಿಚಾ ಚಡ್ಡಾ ಟ್ವೀಟ್​ನ್ನು ರೀ ಟ್ವೀಟ್​ ಮಾಡಿ, ‘ಇದನ್ನು ನೋಡಿ ತುಂಬಾ ನೋವಾಯಿತು. ನಮ್ಮ ಸೇನಾಪಡೆಗಳಿಗೆ ಎಂದಿಗೂ ನಾವು ಕೃತಘ್ನರಾಗಬಾರದು. ಅವರು ಇರುವುದರಿಂದಲೇ ನಾವು ಇರೋದು’ ಎಂದು ಖಡಕ್​ ಆಗಿ ಹೇಳಿದ್ದಾರೆ. ಅದೇ ರೀತಿಯಾಗಿ ಸಿನಿಮಾ ನಿರ್ಮಾಪಕರಾದ ಅಶೋಕ್​ ಪಂಡಿತ್​ ಅವರು ನಟಿ ವಿರುದ್ಧ ಗುರುವಾರ ಮುಂಬೈನ ಜುಹು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ‘ನೀವು ಸೆಲೆಬ್ರಿಟಿ ಎಂಬ ಮಾತ್ರಕ್ಕೆ ಸೈನಿಕರನ್ನು ಅಪಹಾಸ್ಯ ಮಾಡಬಾರದು. ಅವರು ದೇಶವನ್ನು ಕಾಯುತ್ತಿರುವುದರಿಂದಲೇ ನಾವು ಇಲ್ಲಿ ಬದುಕಿದ್ದೇವೆ’ ಎಂದು ಅಶೋಕ್​ ಪಂಡಿತ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಭುಗಿಲ್ಲೆಳುತಿದ್ದಂತೆ ಎಚ್ಚೆತ್ತುಕೊಂಡ ರಿಚಾ ಚಡ್ಡಾ ತಪ್ಪಿನ ಅರಿವಾಗಿ ತಮ್ಮ ಟ್ವೀಟ್​ನ್ನು ನಟಿ ರಿಚಾ ಚಡ್ಡಾ ಡಿಲೀಟ್ ಮಾಡಿದ್ದಾರೆ.

ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಟಿ ರಿಚಾ ಚಡ್ಡಾ

ಪ್ರಕರಣ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ರಿಚಾ ಚಡ್ಡಾ ಅವರು ತಮ್ಮ ಟ್ವೀಟ್​ನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ ಮತ್ತೊಂದು ಟ್ವೀಟ್​ ಮಾಡುವ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ‘ಉದ್ದೇಶಪೂರ್ವಕವಾಗಿ ಪೋಸ್ಟ್​​​ ಮಾಡಿರಲಿಲ್ಲವಾದರೂ, ವಿವಾದಕ್ಕೆ ಕಾರಣವಾದ ಆ ಮೂರು ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೇನೆಯಲ್ಲಿರುವ ಪ್ರತಿಯೊಬ್ಬರ ಕುರಿತು ನನಗೆ ಗೌರವವಿದೆ. ನನ್ನ ಸ್ವಂತ ತಾತ ಕೂಡ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದು, ಅವರು 1960 ರ ದಶಕದಲ್ಲಿ ಇಂಡೋ-ಚೀನಾ ಯುದ್ಧದಲ್ಲಿ ಅವರ ಕಾಲಿಗೆ ಬುಲೆಟ್ ಬಿದ್ದಿತ್ತು. ನನ್ನ ಮಾವ ಕೂಡ ಸೇನೆಯ ಭಾಗವಾಗಿದ್ದರು. ಹೀಗಾಗಿ ಸೇನೆಯನ್ನು ನೋಯಿಸುವ ಯಾವ ಉದ್ದೇಶವೂ ಇರಲಿಲ್ಲ’ ಎಂದು ರಿಚಾ ಚಡ್ಡಾ ಟ್ವೀಟ್​ ಮೂಲಕ ಕ್ಷಮೆ ಕೇಳಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada