
ರಜನೀಕಾಂತ್ (Rajinikanth) ನಟನೆಯ ‘ಕೂಲಿ’ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಮಾತ್ರವೇ ಬಾಕಿ ಇದೆ. ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದ್ದು, ಬೆಳಿಗ್ಗೆ 5 ಗಂಟೆಯಿಂದಲೇ ಶೋಗಳು ಪ್ರಾರಂಭ ಆಗಲಿವೆ. ‘ಕೂಲಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿ ನಡೆದಿದ್ದು ಹಲವು ಪ್ರಮುಖ ನಗರಗಳಲ್ಲಿ ಸಿನಿಮಾದ ಬಹುತೇಕ ಶೋಗಳು ಮುಂಚಿತವಾಗಿ ಸೋಲ್ಡ್ ಔಟ್ ಆಗಿವೆ. ಆದರೆ ತೆಲುಗು ರಾಜ್ಯಗಳಲ್ಲಿ ಮಾತ್ರ ‘ಕೂಲಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಸಿನಿಮಾ ಪ್ರೇಮಿಗಳು ಪವನ್ ಕಲ್ಯಾಣ್ ಅವರನ್ನು ನೆನಪಿಸಿಕೊಳ್ಳುತ್ತಿದ್ದು, ಮನವಿಯೊಂದನ್ನು ಮಾಡುತ್ತಿದ್ದಾರೆ.
‘ಕೂಲಿ’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿಯೂ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಆಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿಯೂ ಸಹ ದೊರೆತಿದೆ. ಇದೇ ಕಾರಣಕ್ಕೆ ಆಂಧ್ರ ಮತ್ತು ತೆಲಂಗಾಣಗಳಲ್ಲಿ ‘ಕೂಲಿ’ ಸಿನಿಮಾದ ಟಿಕೆಟ್ ದರ ಬಹಳ ಹೆಚ್ಚಾಗಿದೆ. ಸಿನಿಮಾದ ಸರಾಸರಿ ಟಿಕೆಟ್ ಬೆಲೆಯೇ 350 ರಿಂದ 400 ರೂಪಾಯಿಗಳಾಗಿವೆ. ಕೆಲವೆಡೆ 500 ರೂಪಾಯಿಗಳಿಗೂ ಟಿಕೆಟ್ ಮಾರಾಟ ಆಗುತ್ತಿದೆ. ಇದು ಸಿನಿಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ಪರ ಭಾಷೆ ಸಿನಿಮಾಗಳವರು ತೆಲುಗು ಸಿನಿಮಾ ಪ್ರೇಮಿಗಳನ್ನು ದೋಚುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಇಂಥಹಾ ಸನ್ನಿವೇಶಗಳಲ್ಲಿ ಪವನ್ ಕಲ್ಯಾಣ್ ಅವರು ಮಧ್ಯ ಪ್ರವೇಶಿಸಿ, ತೆಲುಗು ಸಿನಿಮಾ ಪ್ರೇಮಿಗಳ ಹಿತ ಕಾಪಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸಿಂಗಪುರದಲ್ಲೂ ರಜನೀ ಹವಾ, ‘ಕೂಲಿ’ ಸಿನಿಮಾ ನೋಡಲು ರಜೆ ಘೋಷಣೆ
ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ಬೆಲೆ ಸಹ ಇಷ್ಟೋಂದು ಇರಲಿಲ್ಲ. ‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ದರಕ್ಕಿಂತಲೂ ದುಪ್ಪಟ್ಟು ಬೆಲೆಯಿದೆ ‘ಕೂಲಿ’ ಸಿನಿಮಾದ್ದು. ಮುಂದಿನ ಹತ್ತು ದಿನಗಳ ವರೆಗೆ ‘ಕೂಲಿ’ ಸಿನಿಮಾದ ಟಿಕೆಟ್ ಬೆಲೆ ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿಯೇ ಇರಲಿದೆ. 10 ದಿನಗಳ ಬಳಿಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 222 ರೂಪಾಯಿ ಮಲ್ಟಿಪ್ಲೆಕ್ಸ್ನಲ್ಲಿ 277 ರೂಪಾಯಿಗಳಾಗಲಿದೆ.
ಕರ್ನಾಟಕದಲ್ಲಂತೂ ‘ಕೂಲಿ’ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ಕರ್ನಾಟಕದಲ್ಲಿ ಕೆಲವು ಅರ್ಲಿ ಮಾರ್ನಿಂಗ್ ಶೋ ಟಿಕೆಟ್ ಬೆಲೆ 800-900 ರೂಪಾಯಿ ಸಹ ಇವೆ. ಬೆಂಗಳೂರಿನ ಹಲವಾರು ಚಿತ್ರಮಂದಿರಗಳಲ್ಲಿ ‘ಕೂಲಿ’ ಟಿಕೆಟ್ ಬೆಲೆ 500 ರೂಪಾಯಿಗಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ