ಒಟ್ಟಿಗೆ ನಟಿಸಲಿದ್ದಾರೆ ರಾಜ್, ರಕ್ಷಿತ್, ರಿಷಬ್; ಅಪ್ಡೇಟ್ ಕೊಟ್ಟ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಇದೆ. ಆದರೆ, ರಾಜ್ ಬಿ ಶೆಟ್ಟಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಈ ಮೂವರೂ ಒಟ್ಟಿಗೆ ಸಿನಿಮಾ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ರಿಷಬ್ ಮತ್ತು ರಕ್ಷಿತ್ ಇಬ್ಬರೂ ತಮ್ಮದೇ ಆದ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಪರಭಾಷೆಯಲ್ಲೂ ಮೆಚ್ಚುಗೆ ಪಡೆದಿದೆ. ಅವರು ಹೋದಲ್ಲಿ, ಬಂದಲ್ಲಿ ‘ಆರ್ಆರ್ಆರ್’ ಬಗ್ಗೆ ಕೇಳಲಾಗುತ್ತಿದೆ. ಹಾಗಂತ ರಾಜಮೌಳಿ ಸಿನಿಮಾ ಬಗ್ಗೆ ಅಲ್ಲ. ರಕ್ಷಿತ್, ರಿಷಬ್ ಹಾಗೂ ರಾಜ್ ಬಿ ಶೆಟ್ಟಿ (Raj b Shetty) ಕಾಂಬಿನೇಷನ್ ಬಗ್ಗೆ. ಮೂವರು ಒಟ್ಟಾಗಿ ಸಿನಿಮಾ ಮಾಡೋದು ಯಾವಾಗ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ರಿಷಬ್ ಜೊತೆ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮಾಡಿದ್ದಾರೆ. ರಿಷಬ್ ಹಾಗೂ ರಕ್ಷಿತ್ ‘ಕಿರಿಕ್ ಪಾರ್ಟಿ’ ಮೊದಲಾದ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇನ್ನು ರಕ್ಷಿತ್ ಹಾಗೂ ರಾಜ್ ಕೂಡ ಒಟ್ಟಾಗಿ ನಟಿಸಿದ್ದಾರೆ. ಆದರೆ, ಈ ಮೂವರು ಒಂದೇ ಸಿನಿಮಾದಲ್ಲಿ ಕೆಲಸ ಮಾಡಿಲ್ಲ. ಇದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ರಾಜ್ ಉತ್ತರಿಸಿದ್ದಾರೆ. ಆದರೆ, ಇದು ಸದ್ಯಕ್ಕಂತೂ ಸೆಟ್ಟೇರಲ್ಲ ಎಂದಿದ್ದಾರೆ.
ರಾಜ್ ಬಿ. ಶೆಟ್ಟಿ ಮಾತು
View this post on Instagram
ಸಂದರ್ಶನ ಒಂದರಲ್ಲಿ ರಾಜ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಈ ವೇಳೆ ಉತ್ತರಿಸಿದ ರಾಜ್, ‘ಅದು ಸದ್ಯಕ್ಕಂತೂ ಆಗಲ್ಲ. ರಿಷಬ್ ಈಗ ದೊಡ್ಡ ನಟ ಹಾಗೂ ತುಂಬಾನೇ ಬ್ಯುಸಿ ಆಗಿದ್ದಾರೆ ಕೂಡ. ರಕ್ಷಿತ್ ಕೂಡ ಅವರದ್ದೇ ಪ್ರಾಜೆಕ್ಟ್ನಲ್ಲಿ ಬ್ಯುಸಿ ಇದ್ದಾರೆ. ರಕ್ಷಿತ್ ಸ್ಕ್ರಿಪ್ಟ್ ಬರೆದಿದ್ದರು. ಮಿಡ್ ವೇ ಟು ಮೋಕ್ಷ ಎಂಬುದು ಚಿತ್ರದ ಟೈಟಲ್ ಆಗಿತ್ತು. ನಾನು ಕೂಡ ಆ ಚಿತ್ರದ ಬರಹಗಾರ. ಇದರಲ್ಲಿ ಮೂರು ಪಾತ್ರಗಳು ಇದ್ದವು. ನಾನು, ರಕ್ಷಿತ್, ರಿಷಬ್ ನಟಿಸಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಸೆಟ್ಟೇರಲಿಲ್ಲ. ಇದು ಸದ್ಯಕ್ಕಂತೂ ಸೆಟ್ಟೇರಲ್ಲ. ರಕ್ಷಿತ್ ಅವರು ಈಗ ಮಾಡುತ್ತಿರುವ ಪ್ರಾಜೆಕ್ಟ್ಗೆ ಎರಡೂವರೆ ವರ್ಷ ಬೇಕು ಎಂದಿದ್ದಾರೆ’ ಅವರು.
ಇದನ್ನೂ ಓದಿ: ನೀವು ಬಿಡಿ ಚಿತ್ರರಂಗ ಆಳುವವರು ಎಂದ ತೆಲುಗು ರಿಪೋರ್ಟರ್ಗೆ ಬಟ್ಟೆ ತೋರಿಸಿ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ
ರಕ್ಷಿತ್ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಳಿಕ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ‘ರಿಚರ್ಡ್ ಆ್ಯಂಟನಿ’ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ ಎನ್ನಲಾಗಿದೆ. ಅವರು ಸದ್ಯ ಹುಟ್ಟೂರಾದ ಉಡುಪಿಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




