ವಯಸ್ಸು ಏರುತ್ತಿದೆ ಆದರೆ ಮದುವೆಗೆ ಯಾರೂ ಹೆಣ್ಣು ಕೊಡುತ್ತಿಲ್ಲವೆಂದು ರೊಚ್ಚಿಗೆದ್ದ ಕೆಲ ಬ್ರಹ್ಮಚಾರಿ (Bachelor) ಯುವಕರು ಮದುವೆಯಾಗಲೆಂದು ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು ಈ ಪಾದಯಾತ್ರೆಗೆ ಸ್ಯಾಂಡಲ್ವುಡ್ನ (Sandalwood) ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್ ಡಾಲಿ ಧನಂಜಯ್ (Daali Dhananjay) ಚಾಲನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕರು ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಗೆ ಚಾಲನೆ ನೀಡಿರುವ ಡಾಲಿ ಧನಂಜಯ್ ಕೆಲ ದೂರ ಅವಿವಾಹಿತ ಯುವಕರೊಂದಿಗೆ ತಾವೂ ಹೆಜ್ಜೆ ಹಾಕಿದರು. ಈ ಸಮಯದಲ್ಲಿ ಮತ್ತೊಬ್ಬ ನಟ ನಾಗಭೂಷಣ್ ಸಹ ಇದ್ದರು.
ಬ್ರಹ್ಮಚಾರಿಗಳ ನೋವು ಆಲಿಸಿದ ಡಾಲಿ ಧನಂಜಯ್ ಹಾಗೂ ನಾಗಭೂಷಣ್, ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಎಲ್ಲ ಬ್ರಹ್ಮಚಾರಿಗಳು ಮುಂದಿನ ವರ್ಷದ ವೇಳೆಗೆ ಗೃಹಸ್ಥರಾಗಲಿ ಎಂದು ಹಾರೈಸಿ, ಬಡವರ ಮಕ್ಳು ಬೆಳೀಬೇಕು, ರೈತರ ಮಕ್ಳಿಗೆ ಹೆಣ್ಣು ಸಿಗ್ಬೇಕು ಎಂದರು ಡಾಲಿ.
ಈ ಪಾದಯಾತ್ರೆಯಲ್ಲಿ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಗ್ರಾಮಗಳ ಅವಿವಾಹಿತ ಯುವಕರು ಹಾಗೂ ಹೊರ ರಾಜ್ಯದ ಇಬ್ಬರು ಯುವಕರು ಸಹ ಭಾಗವಹಿಸಿದ್ದು ವಿಶೇಷ. ಪಾದಯಾತ್ರೆ ತಂಡದಲ್ಲಿರುವ ಬಹುತೇಕರು ರೈತರ ಮಕ್ಕಳು, ಸ್ವತಃ ಯುವ ರೈತರೇ ಆಗಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಊಟ, ವಸತಿ ಹಾಗೂ ಪಾನೀಯದ ವ್ಯವಸ್ಥೆಯನ್ನು ಆಯೋಜಕರೇ ಮಾಡಿದ್ದು, ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮೂರು ದಿನಗಳ ನಡೆದು ಈ ತಂಡವು ಮಲೆ ಮಾದೇಶ್ವರ ಬೆಟ್ಟ ಸೇರಿಕೊಳ್ಳಲಿದೆ.
ಗ್ರಾಮೀಣ ಭಾಗದ ಯುವಕರಿಗೆ ಮದುವೆಯಾಗಲು ಹೆಣ್ಣು ಕೊಡುತ್ತಿಲ್ಲ, ಅದರಲ್ಲಿಯೂ ರೈತರ ಮನೆ ಮಕ್ಕಳನ್ನಂತೂ ಹೆಣ್ಣು ಹೆತ್ತವರು ತೀರ ಅವಗಣನೆ ಮಾಡಿದ್ದಾರೆ ಎಂದು ಕೆಲ ಅವಿವಾಹಿತ ಯುವಕರು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ಕಡೆಗಣನೆಗೆ ಒಳಗಾದ ಅವಿವಾಹಿತರಿಗೆ ವಿವಾಹವಾಗಲೆಂದು ಈ ಪಾದಯಾತ್ರೆಯನ್ನು ಪ್ರತಿ ವರ್ಷವೂ ಆಯೋಜಿಸುವುದಾಗಿ ಪಣ ತೊಟ್ಟಿದ್ದಾರೆ ಕೆಎಂ ದೊಡ್ಡಿಯ ಬ್ರಹ್ಮಚಾರಿಗಳು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಕಡ್ಡಾಯವಾಗಿ 30 ವರ್ಷದ ದಾಟಿದ ಅವಿವಾಹಿತರಷ್ಟೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಮದುವೆಯಾದವರಿಗೆ ಪಾದಯಾತ್ರೆ ಮಾಡಲು ಅವಕಾಶವಿಲ್ಲ. ನಿಶ್ಚಿತಾರ್ಥ ಆದವರೂ ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:52 am, Thu, 23 February 23