ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರ ಸಾಕಷ್ಟು ವಿವಾದ ಹುಟ್ಟು ಹಾಕಿದೆ. ಅವರ ಸಾವಿನ ಬಗ್ಗೆ ಸಾಕಷ್ಟು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ, ಪ್ರಕರಣದ ತನಿಖೆ ಸಿಬಿಐಗೆ ವಹಿಸಲಾಗಿದೆ. ಈ ಪ್ರಕರಣದ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿರುವಾಗಲೇ ಕೆಲವರು ಸುಶಾಂತ್ ಸಾವಿನ ಬಗ್ಗೆ ಸಿನಿಮಾ ಮಾಡಿದ್ದಾರೆ. ಇದಕ್ಕೆ ತಡೆ ನೀಡುವಂತೆ ಸುಶಾಂತ್ ಸಿಂಗ್ ತಂದೆ ದೆಹಲಿ ಹೈಕೋರ್ಟ್ನಲ್ಲಿ ಕೋರಿದ್ದರು. ಆದರೆ, ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
‘ನ್ಯಾಯ್ ದಿ ಜಸ್ಟೀಸ್’ ಸಿನಿಮಾ ಶುಕ್ರವಾರ (ಜೂನ್ 11) ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಸುಶಾಂತ್ ಜೀವನ ಆಧರಿಸಿದ ಈ ಸಿನಿಮಾ ಸಿದ್ಧಗೊಂಡಿದೆಯಂತೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್, ‘ಈ ಸಿನಿಮಾವನ್ನು ಸುಶಾಂತ್ ಕುಟುಂಬದ ಅನುಮತಿ ಇಲ್ಲದೆ ಸಿದ್ಧಪಡಿಸಲಾಗಿದೆ. ಮಗನ ಆತ್ಮಹತ್ಯೆಯಲ್ಲಿ ಪಾತ್ರವಿದೆ ಎಂದು ಆರೋಪಿಸಲ್ಪಟ್ಟ ವ್ಯಕ್ತಿಗಳನ್ನು ಚಿತ್ರದಲ್ಲಿ ವಿಶ್ವಾಸಾರ್ಹರು ಎಂದು ತೋರಿಸಲಾಗಿದೆ’ ಎಂಬುದಾಗಿ ಆರೋಪಿಸಿ, ದೆಹಲಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
‘ಸಾಕಷ್ಟು ಸಿನಿಮಾ ನಿರ್ಮಾತೃರು, ವೆಬ್ ಸೀರಿಸ್ ತಯಾರಕರು, ಬರಹಗಾರರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಸಿನಿಮಾಗೆ ತಡೆ ನೀಡಬೇಕು’ ಎಂದು ಕೃಷ್ಣ ಸಿಂಗ್ ಕೋರಿದ್ದರು. ಅಲ್ಲದೆ, ಮಗನ ಇಮೇಜ್ ಹಾಳು ಮಾಡಿದ್ದಕ್ಕೆ 2 ಕೋಟಿ ರೂಪಾಯಿ ನೀಡುವಂತೆ ಆದೇಶಿಸಬೇಕು ಎಂದು ಕೋರ್ಟ್ ಬಳಿ ಮನವಿ ಮಾಡಿದ್ದರು.
‘ನ್ಯಾಯ್: ದಿ ಜಸ್ಟೀಸ್’ ಮಾತ್ರವಲ್ಲದೆ, ಸುಶಾಂತ್ ಸಿಂಗ್ ಬಗ್ಗೆ ಹಲವು ಚಿತ್ರಗಳು ಸಿದ್ಧಗೊಂಡಿವೆ. ‘ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’ ‘ಶಶಾಂಕ್’ ಮತ್ತು ಇನ್ನೂ ಹೆಸರಿಡದ ಸಿನಿಮಾ ಸುಶಾಂತ್ ಜೀವನ ಆಧರಿಸಿ ಸಿದ್ಧಗೊಂಡಿದೆ. ಈಗ ನ್ಯಾಯಾಲಯ ನೀಡಿರುವ ಈ ತೀರ್ಪಿನಿಂದ ಸುಸಾಂತ್ ಸಿಂಗ್ ಕುಟುಂಬಕ್ಕೆ ಹಿನ್ನಡೆ ಉಂಟಾದಂತಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?