ಪೆಟ್ಟು ತಿನ್ನಬೇಕಾಗುತ್ತೆ ಎಂಬ ಭಯದಲ್ಲಿ ಖಾನ್​ ಬದಲು ದಿಲೀಪ್​ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ ದಿಗ್ಗಜ ನಟ

| Updated By: Digi Tech Desk

Updated on: Jul 07, 2021 | 5:29 PM

Dilip Kumar Death: ಪೇಶಾವರದಲ್ಲಿ ಜನಿಸಿದ ದಿಲೀಪ್​ ಕುಮಾರ್​ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್​ ಯೂಸೂಫ್​ ಖಾನ್​. ಆದರೆ ಎರಡು ಕಾರಣಗಳಿಂದಾಗಿ ಅವರು ಹೆಸರು ಬದಲಾಯಿಸಿಕೊಂಡರು.

ಪೆಟ್ಟು ತಿನ್ನಬೇಕಾಗುತ್ತೆ ಎಂಬ ಭಯದಲ್ಲಿ ಖಾನ್​ ಬದಲು ದಿಲೀಪ್​ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ ದಿಗ್ಗಜ ನಟ
ದಿಲೀಪ್​ ಕುಮಾರ್​
Follow us on

ಬಾಲಿವುಡ್​ನಲ್ಲಿ ದಶಕಗಳ ಕಾಲ ಸ್ಟಾರ್​ ಆಗಿ ಮೆರೆದ ದಿಲೀಪ್​ ಕುಮಾರ್ ಅವರು ಬುಧವಾರ (ಜು.7) ನಿಧನರಾದರು. ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರ ಮೂಲ ಹೆಸರು ದಿಲೀಪ್​ ಕುಮಾರ್​ ಅಲ್ಲವೇ ಅಲ್ಲ. ಈಗ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ 1922ರಲ್ಲಿ ಜನಿಸಿದ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್​ ಯೂಸೂಫ್​ ಖಾನ್​. ಆದರೆ ಚಿತ್ರರಂಗಕ್ಕೆ ಬರುವಾಗ ಅವರು ದಿಲೀಪ್​ ಕುಮಾರ್​ ಎಂದು ಹೆಸರು ಬದಲಾಯಿಸಿಕೊಂಡರು. ಅದಕ್ಕೆ ಎರಡು ಮುಖ್ಯ ಕಾರಣಗಳು ಇದ್ದವು.

ಮೊಹಮ್ಮದ್​ ಯೂಸೂಫ್​ ಖಾನ್ ತಂದೆಗೆ ತಮ್ಮ ಪುತ್ರ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದು ಇಷ್ಟ ಇರಲಿಲ್ಲ. ತಾವು ನಟನೆ ಆರಂಭಿಸಿರುವುದು ತಂದೆಗೆ ಗೊತ್ತಾದರೆ ಅವರಿಂದ ಖಂಡಿತ ಪೆಟ್ಟು ತಿನ್ನಬೇಕಾಗುತ್ತದೆ ಎಂಬ ಭಯ ಯೂಸೂಫ್​ ಖಾನ್​ ಮನದಲ್ಲಿ ಮೂಡಿತು. ಹಾಗಾಗಿ ತಂದೆಗೆ ಗೊತ್ತಾಗಬಾರದು ಎಂಬ ಕಾರಣಕ್ಕೆ ದಿಲೀಪ್​ ಕುಮಾರ್​ ಎಂದು ಹೆಸರು ಬದಲಾಯಿಸಿಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು.

ಆರಂಭದಲ್ಲಿ ಅವರ ತಂದೆಗೆ ಮಗನ ಈ ಕಸುಬು ಕಿಂಚಿತ್ತೂ ಹಿಡಿಸುತ್ತಿರಲಿಲ್ಲ. ಬಳಿಕ ಚಿತ್ರರಂಗದಲ್ಲಿ ದಿಲೀಪ್​ ಕುಮಾರ್​ ಯಶಸ್ಸು ಕಂಡ ನಂತರದಲ್ಲಿ ಕುಟುಂಬದಿಂದ ಬೆಂಬಲ ಸಿಕ್ಕಿತು. 1944ರಲ್ಲಿ ತೆರೆಕಂಡ ‘ಜ್ವಾರ್​ ಭಾಟ’ ದಿಲೀಪ್​ ನಟನೆಯ ಮೊದಲ ಸಿನಿಮಾ. ಆ ಚಿತ್ರದ ನಿರ್ಮಾಪಕಿ ದೇವಿಕಾ ರಾಣಿ ಅವರೇ ಯೂಸೂಫ್​ ಖಾನ್​ಗೆ ಹೆಸರು ಬದಲಾಯಿಸಿಕೊಳ್ಳುವ ಸಲಹೆ ನೀಡಿದ್ದು.

‘ಶೀಘ್ರದಲ್ಲೇ ನಾನು ನಿನ್ನನ್ನು ನಟನಾಗಿ ಲಾಂಚ್​ ಮಾಡುತ್ತೇನೆ. ನೀನು ಸಿನಿಮಾಗಾಗಿ ಹೆಸರು ಬದಲಾಯಿಸಿಕೊಂಡರೆ ಒಳ್ಳೆಯದು ಎನಿಸುತ್ತದೆ. ಪ್ರೇಕ್ಷಕರು ನಿನ್ನ ಜೊತೆ ಹೆಚ್ಚು ಆಪ್ತವಾಗುವಂತಹ ದಿಲೀಪ್​ ಕುಮಾರ್​ ಎಂಬ ಹೆಸರು ಸೂಕ್ತ ಎಂಬುದು ನನ್ನ ಭಾವನೆ’ ಎಂದು ದೇವಿಕಾ ರಾಣಿ ಸಲಹೆ ನೀಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಮೊಹಮ್ಮದ್​ ಯೂಸೂಫ್​ ಖಾನ್​ ಅವರು ದಿಲೀಪ್​ ಕುಮಾರ್ ಆಗಿ ಬದಲಾದರು.

ಮೊದಲ ಸಿನಿಮಾ ‘ಜ್ವಾರ್​ ಭಾಟಾ’ದಿಂದ ದಿಲೀಪ್​ ಕುಮಾರ್​ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದಿಲೀಪ್​ ಅಭಿನಯ ಇಷ್ಟವಾಯಿತು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಶಕದಲ್ಲಿ ದಿಲೀಪ್​ ಕುಮಾರ್​ ಸ್ಟಾರ್​ ಆದರು. ಎರಡನೇ ದಶಕದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚಿದರು. ದೇವದಾಸ್​, ನಯಾ ದೌರ್​, ಮಧುಮತಿ, ಕೊಹಿನೂರ್​, ಮುಘಲ್​-ಏ-ಆಜಮ್​ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ದಿಲೀಪ್​ ಕುಮಾರ್​ ನಟಿಸಿದರು. 1998ರಲ್ಲಿ ತೆರೆಕಂಡ ‘ಖಿಲಾ’ ದಿಲೀಪ್​ ನಟನೆಯ ಕೊನೇ ಸಿನಿಮಾ.

ಇದನ್ನೂ ಓದಿ:

Dilip Kumar Death: ಬಾಲಿವುಡ್​ ಹಿರಿಯ ನಟ ದಿಲೀಪ್​ ಕುಮಾರ್​ ನಿಧನ

ನಟಿ ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ

Published On - 11:37 am, Wed, 7 July 21