Dilip Kumar Death: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನ
Dilip Kumar: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಟ ದಿಲೀಪ್ ಕುಮಾರ್ ಬುಧವಾರ (ಜು.7) ನಿಧನರಾದರು. ಅಗಲಿದ ದಿಗ್ಗಜನಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಹಿಂದಿ ಚಿತ್ರರಂಗದ ಲೆಜೆಂಡರಿ ನಟ ದಿಲೀಪ್ ಕುಮಾರ್ ಅವರು ಇಂದು (ಜು.7) ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕೆಲವೇ ದಿನಗಳ ಹಿಂದೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿಲೀಪ್ ಕುಮಾರ್ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಜೂ.30ರಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಜೊತೆಯಲ್ಲಿ ಪತ್ನಿ ಸೈರಾ ಬಾನು ಇದ್ದರು. ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂದು ಸೈರಾ ಬಾನು ಹೇಳಿದ್ದರು ಕೂಡ ಬುಧವಾರ ಕಹಿ ಸುದ್ದಿ ಕೇಳಿಬಂದಿದೆ. ದಿಲೀಪ್ ಕುಮಾರ್ ನಿಧನಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
‘ಕೆಲವೇ ನಿಮಿಷಗಳ ಹಿಂದೆ ದಿಲೀಪ್ ಸಾಬ್ ಅವರು ನಿಧನರಾದರು ಎಂಬುದನ್ನು ತೀವ್ರ ನೋವಿನೊಂದಿಗೆ ತಿಳಿಸುತ್ತಿದ್ದೇನೆ. ದೇವರಿಂದಾಗಿ ಬಂದ ನಾವು ಮತ್ತೆ ದೇವರ ಬಳಿಗೆ ತೆರಳುತ್ತೇವೆ’ ಎಂದು ದಿಲೀಪ್ ಕುಮಾರ್ ಕುಟುಂಬದ ಆಪ್ತರಾದ ಫೈಸಲ್ ಫಾರೂಖಿ ಟ್ವೀಟ್ ಮೂಲಕ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.
With a heavy heart and profound grief, I announce the passing away of our beloved Dilip Saab, few minutes ago.
We are from God and to Him we return. – Faisal Farooqui
— Dilip Kumar (@TheDilipKumar) July 7, 2021
1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್ ಕುಮಾರ್ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್, ಮುಘಲ್-ಏ-ಆಜಮ್, ಶಕ್ತಿ, ನಯಾ ದೌರ್, ರಾಮ್ ಔರ್ ಶ್ಯಾಮ್ ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ದಿಲೀಪ್ ಕುಮಾರ್ ನಟಿಸಿದ ಕೊನೇ ಸಿನಿಮಾ ‘ಖಿಲಾ’ 1998ರಲ್ಲಿ ತೆರೆಕಂಡಿತು. ಆ ನಂತರ ಅವರು ಯಾವುದೇ ಚಿತ್ರದಲ್ಲೂ ಬಣ್ಣ ಹಚ್ಚಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ಬಾರಿ ಅವರ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಕೇಳಿಬಂದಾಗ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರು ಆತಂಕಗೊಳ್ಳುತ್ತಿದ್ದರು. ದಿಲೀಪ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಗುತ್ತಿತ್ತು. ಆದರೆ ಈ ಬಾರಿ ಯಾರ ಪ್ರಾರ್ಥನೆಯೂ ಫಲಿಸಲಿಲ್ಲ. 98 ವರ್ಷಗಳ ತುಂಬು ಜೀವನವನ್ನು ನಡೆಸಿದ ದಿಲೀಪ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ದಿಲೀಪ್ ಕುಮಾರ್ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ. ‘ದಿಗ್ಗಜರು ಎಲ್ಲಿಯೂ ಹೋಗುವುದಿಲ್ಲ. ಅವರು ಕೇವಲ ವೇದಿಕೆ ಬದಲಾಯಿಸುತ್ತಾರೆ ಅಷ್ಟೇ’ ಎಂದು ನಟ ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
Legends don’t go anywhere, They just change the stage.#RipDilipKumar sir. pic.twitter.com/UAbhEgMQ5C
— sonu sood (@SonuSood) July 7, 2021
ಇದನ್ನೂ ಓದಿ:
ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ
ರಾಜ್ ಕೌಶಲ್ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
Published On - 8:20 am, Wed, 7 July 21