ತಮ್ಮ ಸಹಿಯನ್ನು ಫೋರ್ಜರಿ (Forgery) ಮಾಡಲಾಗಿದೆ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಹೈದರಾಬಾದ್‌ನ ಪಂಜಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಿರ್ಮಾಪಕರಾದ ನಟ್ಟಿ ಕ್ರಾಂತಿ ಹಾಗೂ ನಟ್ಟಿ ಕರುಣಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರ್‌ಜಿವಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಹಲವು ದಾಖಲೆಗಳಲ್ಲಿ ನಕಲಿ ಸಹಿ ಹಾಕಿ ತಮಗೆ ವಂಚಿಸಿದ್ದಾರೆ ಎಂದು ನಿರ್ದೇಶಕ ಆರೋಪಿಸಿದ್ದಾರೆ. ನಟ್ಟಿಸ್ ಎಂಟರ್‌ಟೈನ್‌ಮೆಂಟ್ಸ್‌ಗೆ ಬಾಕಿ ಉಳಿದಿರುವ ಪಾವತಿಸದ ಕಾರಣ ಆರ್‌ಜಿವಿ ನಿರ್ದೇಶನದ ‘ಮಾ ಇಷ್ಟಂ’ ಚಿತ್ರ ಪ್ರದರ್ಶನಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ಹೈದರಾಬಾದ್ ಟೈಮ್ಸ್‌ನೊಂದಿಗೆ ಮಾತನಾಡಿದ ಆರ್‌ಜಿವಿ, ‘ನಟ್ಟಿಸ್ ಎಂಟರ್‌ಟೈನ್‌ಮೆಂಟ್‌ನ ನಿರ್ಮಾಪಕರು ಅನೇಕ ದಾಖಲೆಗಳಲ್ಲಿ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಅಲ್ಲದೇ ತಡೆಯಾಜ್ಞೆ ತರಲು ನಕಲಿ ಲೆಟರ್‌ಹೆಡ್‌ನೊಂದಿಗೆ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನಾನು ನನ್ನ ಮೂಲ ಲೆಟರ್‌ಹೆಡ್ ಮತ್ತು ಸಹಿಯ ಮಾದರಿಗಳನ್ನು ಪೊಲೀಸರಿಗೆ ಸಲ್ಲಿಸಿದ್ದೇನೆ ಮತ್ತು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಕೇಳಿಕೊಂಡಿದ್ದೇನೆ’ ಎಂದು ಆರ್‌ಜಿವಿ ತಿಳಿಸಿದ್ದಾರೆ.
ಇತ್ತೀಚೆಗೆ ಆರ್‌ಜಿವಿ ಪ್ರಕರಣವೊಂದಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್:
ಇತ್ತೀಚೆಗೆ ಆರ್‌ಜಿವಿ ವಿರುದ್ಧ ಒಂದು ದೂರು ದಾಖಲಾಗಿತ್ತು. ರಾಮ್ ಗೋಪಾಲ್ ವರ್ಮಾ ಚಿತ್ರ ನಿರ್ಮಾಣಕ್ಕಾಗಿ ಪಡೆದ 56 ಲಕ್ಷ ರೂಪಾಯಿ ಸಾಲ ಮರಳಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿ ನಿರ್ಮಾಪಕರೋರ್ವರು ದೂರು ನೀಡಿದ್ದರು. ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 17ಕ್ಕೆ ನಡೆಯಲಿದೆ.
ಆರ್‌ಜಿವಿ ಕ್ರೈಮ್ ಡ್ರಾಮಾ ಚಿತ್ರವಾದ ‘ಸತ್ಯ’, ಥ್ರಿಲ್ಲರ್ ಚಿತ್ರ ‘ಕೌನ್’, ಗ್ಯಾಂಗ್‌ಸ್ಟರ್ ಚಿತ್ರಗಳಾದ ‘ಕಂಪನಿ’ ಮತ್ತು ‘ಸರ್ಕಾರ್’ ಮತ್ತು ಹಾರರ್ ಮಾದರಿಯ ‘ಭೂತ್’ನಂತಹ ಚಲನಚಿತ್ರಗಳಿಂದ ಖ್ಯಾತಿ ಗಳಿಸಿದ್ದಾರೆ. ಕನ್ನಡದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರವನ್ನೂ ಅವರು ನಿರ್ದೇಶಿಸಿದ್ದರು. ಉಪೇಂದ್ರ ನಟನೆಯ ‘ಐ ಆ್ಯಮ್ ಆರ್’ ಚಿತ್ರವನ್ನು ಆರ್‌ಜಿವಿ ನಿರ್ದೇಶಿಸಬೇಕಿದೆ. ಅದು ಇತ್ತೀಚೆಗೆ ಅನೌನ್ಸ್ ಆಗಿತ್ತು. ಗ್ಯಾಂಗ್‌ಸ್ಟರ್ ಕತೆಯನ್ನು ಚಿತ್ರ ಹೊಂದಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ