ದಳಪತಿ ವಿಜಯ್ನ ಭೇಟಿ ಮಾಡಿದ ‘ಡ್ರ್ಯಾಗನ್’ ಟೀಂ; ನಿರ್ದೇಶಕನ ಕಣ್ಣಲ್ಲಿ ನೀರು
Thalapathy Vijay: ಇತ್ತೀಚೆಗಷ್ಟೆ ತಮಿಳಿನಲ್ಲಿ ‘ಡ್ರ್ಯಾಗನ್’ ಹೆಸರಿನ ಸಿನಿಮಾ ಬಿಡುಗಡೆ ಆಗಿದೆ. ಯೂಥ್ಫುಲ್ ಕತೆ ಹೊಂದಿರುವ ಈ ಸಿನಿಮಾ ಸಖತ್ ಹಿಟ್ ಆಗಿದೆ. ಒಟಿಟಿಯಲ್ಲೂ ಸಿನಿಮಾ ಜನ ಮೆಚ್ಚುಗೆ ಪಡೆಯುತ್ತಿದೆ. ಇದೀಗ ಈ ತಂಡ ದಳಪತಿ ವಿಜಯ್ ಅವರನ್ನು ಭೇಟಿಯಾಗಿದೆ. ವಿಜಯ್ ಅವರು ‘ಡ್ರ್ಯಾಗನ್’ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಅಶ್ವತ್ಥ್ ಮಾರಿಮುತ್ತು ನಿರ್ದೇಶನದ ‘ಡ್ರ್ಯಾಗನ್’ ಚಿತ್ರ ಥಿಯೇಟರ್ನಲ್ಲಿ ಗೆದ್ದ ಬಳಿಕ ಇತ್ತೀಚೆಗೆ ಒಟಿಟಿಗೆ ಬಿಡುಗಡೆಯಾಯಿಗಿದೆ. ಈ ಸಿನಿಮಾ ಉತ್ತಮ ಯಶಸ್ಸನ್ನು ಕಂಡಿದೆ. ಈ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವು ಫೆಬ್ರವರಿ 21, 2025ರಂದು ಥಿಯೇಟರ್ನಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಪ್ರೇಕ್ಷಕರಿಂದ ಅನಿರೀಕ್ಷಿತ ಪ್ರತಿಕ್ರಿಯೆಯನ್ನು ಪಡೆದಿದೆ. ಡ್ರ್ಯಾಗನ್ ಚಿತ್ರವು ಸಾಮಾನ್ಯ ಜನರಿಂದ ಹಾಗೂ ಸೆಲೆಬ್ರಿಟಿಗಳಿಂದ ಪ್ರಶಂಸೆ ಗಳಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಡ್ರ್ಯಾಗನ್ ಚಿತ್ರ ತಂಡವನ್ನು ಶ್ಲಾಘಿಸಿದರು. ದಳಪತಿ ವಿಜಯ್ ಈಗಾಗಲೇ ಡ್ರ್ಯಾಗನ್ ಚಿತ್ರತಂಡಕ್ಕೆ ಕರೆ ಮಾಡಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ ಎಂದು ವರದಿ ಆಗಿದೆ. ಈಗ ತಂಡದವರು ವಿಜಯ್ನ ಭೇಟಿ ಮಾಡಿದ್ದಾರೆ.
ದಳಪತಿ ವಿಜಯ್ ಅವರಂತಹ ಸ್ಟಾರ್ ನಾಯಕನನ್ನು ಭೇಟಿಯಾದ ಬಗ್ಗೆ ‘ಡ್ರ್ಯಾಗನ್’ ತಂಡವು ತಮ್ಮ ಸಂತೋಷವನ್ನು ವ್ಯಕ್ತಪಡಿಸಿತು. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಅಶ್ವತ್ ಮಾರಿಮುತ್ತು, ‘ನಾನು ದಳಪತಿ ವಿಜಯ್ ಅವರನ್ನು ಭೇಟಿ ಮಾಡಿದ್ದೇನೆ. ನಾನು ಅವರೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದೆ. ಆದರೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿಲ್ಲ. ಆದರೆ ಅವರ ಎದುರು ಕುಳಿತುಕೊಳ್ಳುವ ಅವಕಾಶ ಸಿಕ್ಕಿತು. ನಾನು ಅವರನ್ನು ನೇರವಾಗಿ ನೋಡಿದೆ, ಮತ್ತು ಅವರೊಂದಿಗೆ ಮಾತನಾಡುವಾಗ ನನ್ನ ಕಣ್ಣಲ್ಲಿ ನೀರು ಬಂತು. ಆ ಪ್ರೀತಿ ಅವರ್ಣನೀಯ,’ ಎಂದು ನಿರ್ದೇಶಕ ಅಶ್ವತ್ ಮಾರಿಮುತ್ತು ದಳಪತಿ ವಿಜಯ್ ಅವರನ್ನು ಭೇಟಿಯಾದ ಕ್ಷಣದ ಬಗ್ಗೆ ಹೇಳಿದರು.
ಇದನ್ನೂ ಓದಿ:ವಾರಕ್ಕೆ ಒಂದಾದರೂ ಡ್ರ್ಯಾಗನ್ ಫ್ರೂಟ್ ತಿನ್ನಬೇಕು, ಯಾಕೆ?
ಅಲ್ಲದೆ, ‘ಡ್ರ್ಯಾಗನ್’ ಚಿತ್ರದ ನಾಯಕ ಪ್ರದೀಪ್ ರಂಗನಾಥನ್ ಅವರು ದಳಪತಿ ವಿಜಯ್ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ದಳಪತಿ ವಿಜಯ್ ನನಗೆ, ‘ಬನ್ನಿ ಬ್ರೋ’ ಎಂದರು. ದಳಪತಿ ವಿಜಯ್ ಹೀಗೆ ಹೇಳಿದಾಗ ನನಗೆ ಹೇಗನಿಸಿತು ಗೊತ್ತಾ? ನಾನು ವಿವರಿಸದೆಯೇ ನೀವೆಲ್ಲರೂ ಇದನ್ನು ಅರ್ಥಮಾಡಿಕೊಂಡಿದ್ದೀರಿ. ದಳಪತಿ ವಿಜಯ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವುದು ಹೇಗಿರುತ್ತದೆ ಎಂದು ಎಲ್ಲರಿಗೂ ತಿಳಿದಿದೆ’ ಎಂದಿದ್ದಾರೆ ಅವರು. ‘ನಮ್ಮೊಂದಿಗೆ ಸಮಯ ಕಳೆದಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂದು ಪ್ರದೀಪ್ ಸಾಮಾಜಿಕ ಮಾಧ್ಯಮದಲ್ಲಿ ವಿಜಯ್ ಬಗ್ಗೆ ಬರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ