AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿರತ್ನಂ-ಕಮಲ್ ಹಾಸನ್ ಸಿನಿಮಾದಲ್ಲಿ ತಾರಾ ದಂಡು: ಮೇಕಪ್ ​ಮ್ಯಾನ್​ನಿಂದಾಗಿ ಗುಟ್ಟು ರಟ್ಟು

Mani-Kamal: 36 ವರ್ಷಗಳ ಬಳಿಕ ದಿಗ್ಗಜರಾದ ಕಮಲ್ ಹಾಸನ್ ಹಾಗೂ ಮಣಿರತ್ನಂ ಒಂದಾಗುತ್ತಿದ್ದಾರೆ. ಇವರಿಬ್ಬರ ಸಿನಿಮಾದಲ್ಲಿ ಇತರೆ ಕೆಲವು ತಾರಾ ನಟರು ಇರಲಿದ್ದು, ಆ ನಟರು ಯಾರೆಂಬ ಗುಟ್ಟನ್ನು ಮೇಕಪ್ ಕಲಾವಿದರೊಬ್ಬರು ರಟ್ಟು ಮಾಡಿದ್ದಾರೆ.

ಮಣಿರತ್ನಂ-ಕಮಲ್ ಹಾಸನ್ ಸಿನಿಮಾದಲ್ಲಿ ತಾರಾ ದಂಡು: ಮೇಕಪ್ ​ಮ್ಯಾನ್​ನಿಂದಾಗಿ ಗುಟ್ಟು ರಟ್ಟು
ಮಣಿರತ್ನಂ
ಮಂಜುನಾಥ ಸಿ.
|

Updated on: Sep 13, 2023 | 8:38 PM

Share

ಭಾರತ ಚಿತ್ರರಂಗದ ಇಬ್ಬರು ದಿಗ್ಗಜರು ಮತ್ತೆ ಒಂದಾಗುತ್ತಿದ್ದಾರೆ. ‘ನಾಯಗನ್’ ಸಿನಿಮಾ ಮೂಲಕ ಇಡೀ ಭಾರತ ಚಿತ್ರರಂಗವೇ ದಕ್ಷಿಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಮಣಿರತ್ನಂ (Mani Rathnam) ಹಾಗೂ ಕಮಲ್ ಹಾಸನ್ (Kamal Haasan) ಜೋಡಿ ಈಗ ಮತ್ತೆ ಹೊಸ ಸಿನಿಮಾಕ್ಕಾಗಿ ಒಂದಾಗುತ್ತಿದೆ. ಕಮಲ್ ಹಾಸನ್ ಅವರ 234ನೇ ಸಿನಿಮಾವನ್ನು ಅವರ ಹಳೆಯ ಗೆಳೆಯ, ದಿಗ್ಗಜ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇನ್ನೂ ಹಲವು ಸ್ಟಾರ್​ ನಟ-ನಟಿಯರು ಕೆಲಸ ಮಾಡಲಿದ್ದಾರೆ.

ಕಮಲ್ ಹಾಸನ್ ಹಾಗೂ ಮಣಿರತ್ನಂ ಒಟ್ಟಿಗೆ ಕೆಲಸ ಮಾಡುವ ವಿಷಯ ಈ ಹಿಂದೆಯೇ ಬಹಿರಂಗಗೊಂಡಿತ್ತು, ಆದರೆ ಆ ಸಿನಿಮಾದಲ್ಲಿನ ಇತರ ತಾರೆಯರ ಬಗ್ಗೆ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದರೆ ಅದೇ ಸಿನಿಮಾಕ್ಕೆ ಕೆಲಸ ಮಾಡಲಿದ್ದ ಮೇಕಪ್ ಕಲಾವಿದರೊಬ್ಬರು ಗುಟ್ಟಾಗಿರಿಸಬೇಕಿದ್ದ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ರಂಜಿತ್ ಅಂಬಾಡಿ, ಕಮಲ್-ಮಣಿರತ್ನಂ ಸಿನಿಮಾದಲ್ಲಿ ಪ್ರಸಾದನ ಕಲಾವಿದರಾಗಿ ಕೆಲಸ ಮಾಡಲಿದ್ದಾರೆ. ಸಿನಿಮಾದ ಅನೌನ್ಸ್​ಮೆಂಟ್ ಪ್ರೋಮೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಂಜಿತ್ ಅಂಬಾಡಿ, ಆ ಪೋಸ್ಟ್​ ಅನ್ನು ನಟರಾದ ದುಲ್ಕರ್ ಸಲ್ಮಾನ್, ಜಯಂ ರವಿ ಹಾಗೂ ನಟಿ ತ್ರಿಷಾ ಕೃಷ್ಣನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಮಲ್ ಹಾಸನ್, ಮಣಿರತ್ನಂ ಹಾಗೂ ಎಆರ್ ರೆಹಮಾನ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ದುಲ್ಕರ್, ಜಯಂ ರವಿ ಹಾಗೂ ತ್ರಿಷಾ ಸಹ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್​ರ ಮೀರಿಸಲಿದ್ದಾರೆಯೇ ಕಮಲ್ ಹಾಸನ್: ಬಿಗ್​ಬಾಸ್​ಗೆ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆ

ಆದರೆ ಮಣಿರತ್ನಂ ಆಗಲಿ ಚಿತ್ರತಂಡವಾಗಲಿ ಕಮಲ್ ಹಾಸನ್ ಹೊರತಾಗಿ ಇನ್ಯಾವ ನಟರು ಸಿನಿಮಾದಲ್ಲಿ ಇರಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಘೋಷಿಸಿಲ್ಲ. ಆ ವಿಷಯವನ್ನು ಗುಟ್ಟಾಗಿಯೇ ಇರಿಸಿತ್ತು. ಆದರೆ ಈಗ ರಂಜಿತ್ ಅಂಬಾಡಿ ಅವರ ಪೋಸ್ಟ್​ನಿಂದಾಗಿ ಗುಟ್ಟು ರಟ್ಟಾಗಿದೆ.

ಅಲ್ಲಿಗೆ ದುಲ್ಕರ್ ಸಲ್ಮಾನ್, ಜಯಂ ರವಿ ಹಾಗೂ ತ್ರಿಷಾ ಕೃಷ್ಣನ್ ಅವರುಗಳು ಎರಡನೇ ಬಾರಿಗೆ ಮಣಿರತ್ನಂ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಮಣಿರತ್ನಂರ ಈ ಹಿಂದಿನ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’ ನಲ್ಲಿ ಜಯಂ ರವಿ ಹಾಗೂ ತ್ರಿಷಾ ಕೃಷ್ಣನ್ ನಟಿಸಿದ್ದರು. ಮಣಿರತ್ನಂ ನಿರ್ದೇಶಿಸಿದ್ದ ಪ್ರೇಮಕತಾ ಸಿನಿಮಾ ‘ಒಕೆ ಕಣ್ಮನಿ’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದರು. ಈಗ ಈ ಮೂವರು ಮತ್ತೊಮ್ಮೆ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇನ್ನು ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದೆ. 1987 ರಲ್ಲಿ ಬಿಡುಗಡೆ ಆಗಿದ್ದ ‘ನಾಯಗನ್’ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸಿ, ಕಮಲ್ ಹಾಸನ್ ನಟಿಸಿದ್ದರು. ಆ ಸಿನಿಮಾವನ್ನು ಭಾರತದ ‘ಗಾಡ್ ಫಾದರ್’ ಎಂದು ಕರೆಯುವುದುಂಟು. ಹಲವು ಮಾಫಿಯಾ ಸಿನಿಮಾಗಳಿಗೆ ‘ನಾಯಗನ್’ ಸ್ಪೂರ್ತಿ. ಈಗ ಮತ್ತೆ ಈ ಜೋಡಿ ಒಂದಾಗುತ್ತಿದ್ದು, ಸಿನಿಮಾ ಪ್ರೇಮಿಗಳು ಕಾರತದಿಂದ ಸಿನಿಮಾಕ್ಕಾಗಿ ಕಾಯಲು ಆರಂಭಿಸಿದ್ದಾರೆ.