‘ಪುಷ್ಪ 2’ ಸಿನಿಮಾಕ್ಕೆ ಸಂಕಷ್ಟ, ತಂಡ ತೊರೆದ ಪ್ರಮುಖ ತಂತ್ರಜ್ಞ
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಈ ಹಂತದಲ್ಲಿ ಸಿನಿಮಾದ ಪ್ರಮುಖ ತಂತ್ರಜ್ಞರೊಬ್ಬರು ಸಿನಿಮಾದಿಂದ ಹೊರನಡೆದಿದ್ದಾರೆ.
‘ಪುಷ್ಪ 2’ (Pushpa 2) ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಿದೆ. ಆದರೆ ಇಂಥಹಾ ಮಹತ್ವದ ಸಂದರ್ಭದಲ್ಲಿ ಸಿನಿಮಾದ ಪ್ರಮುಖ ತಂತ್ರಜ್ಞರೊಬ್ಬರು ಸಿನಿಮಾ ತಂಡವನ್ನು ಬಿಟ್ಟು ಹೊರಹೋಗಿದ್ದಾರೆ. ಇದು ‘ಪುಷ್ಪ’ ಚಿತ್ರತಂಡಕ್ಕೆ ಭಾರಿ ದೊಡ್ಡ ಹೊಡೆತ ನೀಡಿದೆ. ಹಠಾತ್ತನೆ ತಂತ್ರಜ್ಞರೊಬ್ಬರು ಹೊರ ಹೋಗಿದ್ದರಿಂದಾಗಿ ಸಿನಿಮಾದ ಬಿಡುಗಡೆ ತಡವಾಗಬಹುದೇ ಎಂಬ ಅನುಮಾನ ಸಹ ಅಭಿಮಾನಿಗಳಲ್ಲಿ ಮೂಡಿದೆ.
‘ಪುಷ್ಪ’ ಸಿನಿಮಾದ ಮೊದಲ ಭಾಗದಲ್ಲಿ ಪ್ರೇಕ್ಷಕರು ಅಲ್ಲು ಅರ್ಜುನ್ ನಟನೆ, ಸುಕುಮಾರ್ ಕತೆ, ಹಿನ್ನೆಲೆ ಸಂಗೀತದ ಜೊತೆಗೆ ಎಡಿಟಿಂಗ್ ಅನ್ನು ಸಹ ಬಹುವಾಗಿ ಮೆಚ್ಚಿಕೊಂಡಿದ್ದರು. ಸಿನಿಮಾದ ಶಾರ್ಪ್ನೆಸ್ಗೆ ಕಾರಣವಾಗಿದ್ದು ಎಡಿಟರ್ ನುರಿತ ಎಡಿಟರ್ ಆಂಟೊನಿ ರುಬೇನ್. ಆದರೆ ಈಗ ಆಂಟೊನಿ ರುಬೇನ್ ಪುಷ್ಪ 2 ಚಿತ್ರತಂಡವನ್ನು ಬಿಟ್ಟು ಹೊರನಡೆದಿದ್ದಾರೆ. ಬೇರೆ ಸಿನಿಮಾಗಳಿಗೆ ತಾವು ನೀಡಿದ್ದ ಡೇಟ್ಸ್ ಜೊತೆ ‘ಪುಷ್ಪ 2’ ಸಿನಿಮಾದ ಡೇಟ್ಸ್ ಕ್ಲ್ಯಾಷ್ ಆಗುತ್ತಿದ್ದ ಕಾರಣಕ್ಕೆ ಆಂಟೊನಿ ರುಬೇನ್ ಈ ನಿರ್ಧಾರ ತಳೆದಿದ್ದಾರೆ.
ಆಂಟೊನಿ ರುಬೇನ್ ಈ ಹಿಂದೆ ಶಾರುಖ್ ಖಾನ್ರ ‘ಜವಾನ್’, ‘ವಿಸ್ವಾಸಂ’, ‘ಬಿಗಿಲ್’, ‘ರಾಜಾ ರಾಣಿ’, ‘ತೇರಿ’, ‘ಇರುಂಬು ತುರೈ’ ಇನ್ನೂ ಹಲವು ಸಿನಿಮಾಗಳಿಗೆ ಸಂಕಲನ ಮಾಡಿದ್ದಾರೆ. ಕನ್ನಡದ ‘ಅಯೋಗ್ಯ’, ‘ಜಾಗ್ವಾರ್’ ಸಿನಿಮಾಗಳಿಗೂ ಎಡಿಟಿಂಗ್ ಮಾಡಿದ್ದಾರೆ. ತಮಿಳು, ತೆಲುಗಿನ ಜನಪ್ರಿಯ ಎಡಿಟರ್ ಆಗಿರುವ ಆಂಟೊನಿ ರುಬೇನ್ ಹಲವು ದೊಡ್ಡ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಇದರ ನಡುವೆ ‘ಪುಷ್ಪ 2’ ಸಿನಿಮಾ ಚಿತ್ರೀಕರಣ ತಡವಾದ ಕಾರಣ ಆಂಟೊನಿ ರುಬೇನ್, ಅದೇ ಸಮಯಕ್ಕೆ ಬೇರೆ ಸಿನಿಮಾಗಳಿಗೆ ಡೇಟ್ಸ್ ಕೊಟ್ಟಿದ್ದರಿಂದ ‘ಪುಷ್ಪ 2’ ಸಿನಿಮಾವನ್ನು ತ್ಯಜಿಸಿ ಹೊರಟಿದ್ದಾರೆ.
ಇದನ್ನೂ ಓದಿ:19 ವರ್ಷಗಳ ಹಿಂದೆ ಶಿವಣ್ಣ ಸೃಷ್ಟಿಸಿದ್ದ ಟ್ರೆಂಡ್ ಈಗ ‘ಪುಷ್ಪ 2’ ಚಿತ್ರದಲ್ಲಿ ಮರುಬಳಕೆ
ಆಂಟೊನಿ ರುಬೇನ್, ‘ಪುಷ್ಪ 2’ ಸಿನಿಮಾದಿಂದ ಹೊರಹೋದ ಕಾರಣ ಸುಕುಮಾರ್ ಇದೀಗ ಹೊಸ ಎಡಿಟರ್ ಹುಡುಕಾಟದಲ್ಲಿದ್ದಾರೆ. ಅದರಲ್ಲಿಯೂ ನುರಿತ ಎಡಿಟರ್ ಸಿನಿಮಾಕ್ಕೆ ಬೇಕಾಗಿದ್ದಾರೆ. ಸುಕುಮಾರ್, ‘ಪುಷ್ಪ 2’ ಸಿನಿಮಾಕ್ಕಾಗಿ ನವೀನ್ ನೂಲಿಯನ್ನು ಸಂಪರ್ಕ ಮಾಡಿದ್ದಾರೆ. ‘ಜೆರ್ಸಿ’ ಸಿನಿಮಾದ ಎಡಿಟಿಂಗ್ಗಾಗಿ ನವೀನ್ಗೆ ರಾಷ್ಟ್ರಪ್ರಶಸ್ತಿ ದೊರೆತಿದೆ. ಸುಕುಮಾರ್ ನಿರ್ದೇಶನದ ‘ನಾನ್ನಕು ಪ್ರೇಮತೊ’ ಹಾಗೂ ‘ರಂಗಸ್ಥಳಂ’ ಸಿನಿಮಾಗಳನ್ನು ನವೀನ್ ಅವರೇ ಎಡಿಟ್ ಮಾಡಿದ್ದರು.
‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ‘ಪುಷ್ಪ’ ಮೊದಲ ಭಾಗಕ್ಕಿಂತಲೂ ‘ಪುಷ್ಪ 2’ ಅದ್ಧೂರಿಯಾಗಿಯೂ ಹೆಚ್ಚು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ