‘ಪುಷ್ಪ 2’ ರಿಲೀಸ್ ದಿನಾಂಕ ಬದಲಾಗತ್ತಾ? ಅನುಮಾನಕ್ಕೆ ಕಾರಣವಾದ ಎರಡು ಅಂಶಗಳು
ಕೆಲವು ತಿಂಗಳ ಹಿಂದೆ ಕೂಡ ‘ಪುಷ್ಪ 2’ ಸಿನಿಮಾದ ಬಿಡುಗಡೆ ಡೇಟ್ ಬಗ್ಗೆ ಪ್ರಶ್ನೆ ಎದ್ದಿತ್ತು. ಈಗ ಮತ್ತೆ ಅನುಮಾನ ಶುರುವಾಗಿದೆ. ಚಿತ್ರತಂಡದಲ್ಲಿ ಕೆಲವು ಬದಲಾವಣೆ ಆಗಿವೆ ಎಂದು ಹೇಳಲಾಗುತ್ತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳು ಈ ಸಿನಿಮಾಗಾಗಿ ಕಾತರದಿಂದ ಕಾದಿದ್ದಾರೆ. ಆದರೆ ಶೂಟಿಂಗ್ ಇನ್ನೂ ಮುಗಿದಿಲ್ಲ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ 2’ (Pushpa 2) ಬಿಡುಗಡೆ ದಿನಾಂಕದ ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಲೇ ಇದೆ. ಕೆಲವೇ ತಿಂಗಳ ಹಿಂದೆ ಈ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ವದಂತಿ ಹಬ್ಬಿತ್ತು. ಬಳಿಕ ಅದನ್ನು ಚಿತ್ರತಂಡ ತಳ್ಳಿಹಾಕಿತ್ತು. ಈಗ ಮತ್ತೆ ‘ಪುಷ್ಪ 2’ ಸಿನಿಮಾದ ಬಿಡುಗಡೆ ಡೇಟ್ (Pushpa 2 Release Date) ಮುಂದೂಡಿಕೆ ಬಗ್ಗೆ ಗಾಸಿಪ್ ಹರಿದಾಡಲು ಆರಂಭಿಸಿದೆ. ಅದಕ್ಕೆ ಎರಡು ಅಂಶಗಳು ಕಾರಣ ಆಗಿವೆ. ಹಾಗಾಗಿ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ. ಚಿತ್ರತಂಡ ಕೂಡ ಆ ದಿನಾಂಕವನ್ನು ಹೊರತುಪಡಿಸಿ ಬೇರೆ ದಿನಾಂಕದ ಬಗ್ಗೆ ಮಾತನಾಡಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾದ ಸಂಕಲನಕಾರರ ಬದಲಾವಣೆ ಆಗಿದೆ ಎಂದು ಸುದ್ದಿ ಹರಿಡಿದೆ. ರಿಲೀಸ್ ಡೇಟ್ ಮುಂದೂಡಿಕೆ ಬಗ್ಗೆ ಅನುಮಾನ ಮೂಡಲು ಇದು ಮೊದಲ ಕಾರಣ.
ಎರಡನೇ ಕಾರಣ ಏನೆಂದರೆ, ‘ಪುಷ್ಪ 2’ ಸಿನಿಮಾಗೆ ಇನ್ನೂ ಶೂಟಿಂಗ್ ಮುಗಿದಿಲ್ಲ. ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಅವರು ಮೇ ತಿಂಗಳ ಪೂರ್ತಿ ಈ ಸಿನಿಮಾಗೆ ಚಿತ್ರೀಕರಣ ಮಾಡಲಿದ್ದಾರೆ. ಇನ್ನುಳಿದ ದೃಶ್ಯಗಳನ್ನು ಜೂನ್ ತಿಂಗಳಲ್ಲೂ ಚಿತ್ರೀಕರಿಸಲಾಗುವುದು ಎಂದು ಕೆಲವೆಡೆ ವರದಿ ಆಗಿದೆ. ಹಾಗಾದರೆ ಆಗಸ್ಟ್ 15ರೊಳಗೆ ಸಿನಿಮಾ ಸಿದ್ಧವಾಗತ್ತೋ ಇಲ್ಲವೋ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 19 ವರ್ಷಗಳ ಹಿಂದೆ ಶಿವಣ್ಣ ಸೃಷ್ಟಿಸಿದ್ದ ಟ್ರೆಂಡ್ ಈಗ ‘ಪುಷ್ಪ 2’ ಚಿತ್ರದಲ್ಲಿ ಮರುಬಳಕೆ
ಇದು ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಿದೆ. ಸುಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಲೋಕಸಭಾ ಚುನಾವಣೆಯ ಎಲೆಕ್ಷನ್ ಸಲುವಾಗಿ ಅನೇಕ ಸಿನಿಮಾಗಳ ರಿಲೀಸ್ ಡೇಟ್ ಬದಲಾವಣೆ ಆಗಿದೆ. ಎಲ್ಲರೂ ಹೊಸ ಹೊಸ ಡೇಟ್ಗಾಗಿ ಕಾದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ‘ಪುಷ್ಪ 2’ ಚಿತ್ರತಂಡದವರು ಆಗಸ್ಟ್ 15ರ ದಿನಾಂಕವನ್ನು ಬಿಟ್ಟುಕೊಡುವ ಪ್ರಮೇಯವೇ ಇಲ್ಲ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.