AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ಗೆ ಫಹಾದ್ ಫಾಸಿಲ್, ಯಶಸ್ವಿ ನಿರ್ದೇಶಕನೊಟ್ಟಿಗೆ ಮಾತುಕತೆ

ಪ್ರಸ್ತುತ ಭಾರತ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಮಲಯಾಳಂ ನಟ ಫಹಾದ್ ಫಾಸಿಲ್ ಇದೀಗ ಮೊದಲ ಬಾರಿಗೆ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದೂ ಬಾಲಿವುಡ್​ನ ಯಶಸ್ವೀ ನಿರ್ದೇಶಕನ ಸಿನಿಮಾದಲ್ಲಿ.

ಬಾಲಿವುಡ್​ಗೆ ಫಹಾದ್ ಫಾಸಿಲ್, ಯಶಸ್ವಿ ನಿರ್ದೇಶಕನೊಟ್ಟಿಗೆ ಮಾತುಕತೆ
ಮಂಜುನಾಥ ಸಿ.
|

Updated on: Sep 03, 2024 | 7:14 PM

Share

ಮಲಯಾಳಂ ನಟ ಫಹಾದ್ ಫಾಸಿಲ್ ಪ್ರಸ್ತುತ ಭಾರತ ಚಿತ್ರರಂಗದ ಪ್ರತಿಭಾವಂತ ನಟ ಎಂಬ ಖ್ಯಾತಿ ಗಳಿಸಿದ್ದಾರೆ. ಫಹಾದ್ ನಟಿಸಿದ್ದಾರೆಂದರೆ ಸಾಕು ಸಿನಿಮಾ ಪ್ರೇಮಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಮಲಯಾಳಂನ ಈ ನಟ ಈಗ ಭಾಷೆಯ ಗಡಿ ದಾಟಿ ಎಲ್ಲ ಭಾಷೆಯ ಸಿನಿಮಾ ಪ್ರೇಮಿಗಳ ನೆಚ್ಚಿನ ನಟರಾಗಿದ್ದಾರೆ. ಫಹಾದ್ ಈಗಾಗಲೇ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಧೂಮ’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ಮೊದಲ ಬಾರಿಗೆ ಹಿಂದಿ ಚಿತ್ರರಂಗಕ್ಕೆ ಕಾಲಿಡಲು ಫಹಾದ್ ಸಜ್ಜಾಗಿದ್ದಾರೆ.

‘ರಾಕ್​ಸ್ಟಾರ್’, ‘ಜಬ್ ವಿ ಮೆಟ್’, ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ‘ಅಮರ್ ಸಿಂಗ್ ಚಮ್ಕೀಲ’ ಸಿನಿಮಾಗಳನ್ನು ನಿರ್ದೇಶಿಸಿರುವ ಬಾಲಿವುಡ್​ನ ಹೆಸರಾಂತ ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಾಯಕ ಎನ್ನಲಾಗುತ್ತಿದೆ. ಇಮ್ತಿಯಾಜ್ ಅಲಿ ಸುಂದರ ಪ್ರೇಮಕತೆಯೊಂದನ್ನು ಸಿದ್ದ ಮಾಡಿಕೊಂಡಿದ್ದು, ನಾಯಕ ದಕ್ಷಿಣ ಭಾರತದ ಸಾಮಾನ್ಯ ವ್ಯಕ್ತಿಯಂತೆ. ಆ ಪಾತ್ರಕ್ಕೆ ಫಹಾದ್ ಫಾಸಿಲ್ ಸೂಕ್ತ ಎಂದು ಇಮ್​ತಿಯಾಜ್ ನಿರ್ಧರಿಸಿದ್ದು ಅದೇ ಕಾರಣಕ್ಕೆ ಫಹಾದ್ ಅನ್ನು ನಟಿಸಲು ಕೋರಿದ್ದಾರೆ.

ಇದನ್ನೂ ಓದಿ:ನಜ್ರಿಯಾ-ಫಹಾದ್ ಫಾಸಿಲ್ ದಾಂಪತ್ಯಕ್ಕೆ 10 ವರ್ಷ; ಹೇಗಿತ್ತು ನೋಡಿ ಸೆಲೆಬ್ರೇಷನ್

ಕಳೆದ ಕೆಲ ತಿಂಗಳಿನಿಂದಲೂ ಫಹಾದ್ ಹಾಗೂ ಇಮ್ತಿಯಾಜ್ ನಡುವೆ ಹಲವು ಸುತ್ತುಗಳ ಮಾತುಕತೆ ಈ ವಿಷಯವಾಗಿ ನಡೆದಿದ್ದು, ಫಹಾದ್ ಫಾಸಿಲ್ ಸಹ ಇಮ್ತಿಯಾಜ್ ಅಲಿಗೆ ಓಕೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ನಾಯಕಿ ಆಯ್ಕೆ ಇನ್ನೂ ಆಗಿಲ್ಲ, ಈ ಬಗ್ಗೆ ಹುಡುಕಾಟ ಜಾರಿಯಲ್ಲಿದೆ. ಫಹಾದ್ ಫಾಸಿಲ್ ಈವರೆಗೆ ಯಾವುದೇ ಹಿಂದಿ ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಅವರ ಹಲವು ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆ ಆಗಿವೆ. ಮಾತ್ರವಲ್ಲದೆ ಹಿಂದಿಯಲ್ಲಿ ಫಹಾದ್ ಫಾಸಿಲ್​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಅಲ್ಲದೆ ಇಮ್ತಿಯಾಜ್ ಅಲಿಗೂ ದೊಡ್ಡ ಅಭಿಮಾನಿ ವರ್ಗ ದೇಶದಾದ್ಯಂತ ಇದೆ. ಈ ಇಬ್ಬರು ಪ್ರತಿಭಾನ್ವಿತರು ಒಟ್ಟಿಗೆ ಸೇರಿದರೆ ಒಂದೊಳ್ಳೆ ಸಿನಿಮಾ ಮೂಡಿ ಬರುವುದಂತೂ ಖಾತ್ರಿ ಎನ್ನಲಾಗುತ್ತಿದೆ.

ಫಹಾದ್ ಫಾಸಿಲ್ ಪ್ರಸ್ತುತ ಆರು ಸಿನಿಮಾಗಳಲ್ಲಿ ಏಕಕಾಲದಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ಜೊತೆಗೆ ‘ವೇಟ್ಟೆಯಾನ್’, ಅಲ್ಲು ಅರ್ಜುನ್ ಜೊತೆ ನಟಿಸಿರುವ ‘ಪುಷ್ಪ 2’ ಬಿಡುಗಡೆ ಆಗಲಿಕ್ಕಿದೆ. ಮಲಯಾಳಂನಲ್ಲಿ ‘ಒದುಂ ಕುತಿರ ಚದುಂ ಕುತಿರ’ ಹಾಗೂ ‘ಬೋಗೆನ್​ವಿಲಿಯಾ’ ತೆಲುಗಿನ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಇನ್ನೂ ಹೆಸರಿಡದ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ