
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ಈಗ ಅವರು ಬೃಹತ್ ಹಣಕಾಸಿನ ವಿವಾದ ಹಾಗೂ ಕಾನೂನು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಎಕ್ಲಾಟಂಟ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯು ಬಾಕಿ ಹಣವನ್ನು ಮರುಪಾವತಿಸುವಂತೆ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ಬೆಳವಣಿಗೆ ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆಯು ರಾಮ್ ಗೋಪಾಲ್ ವರ್ಮಾ ಅವರಿಗೆ ಅಕ್ಟೋಬರ್ 15ರಂದೇ ಕಾನೂನು ನೋಟಿಸ್ ಕಳುಹಿಸಿತ್ತು. ಒಟ್ಟು 29,67,64,000 ರೂಪಾಯಿಗಳ ಬಾಕಿ ಪಾವತಿಸುವಂತೆ ಎಕ್ಲಾಟಂಟ್ ಫಿಲ್ಮ್ಸ್ ಆಗ್ರಹಿಸಿದೆ. ಈ ಒಟ್ಟು ಮೊತ್ತದಲ್ಲಿ 11,38,92,000 ರೂಪಾಯಿ ಬಡ್ಡಿ ಕೂಡ ಸೇರಿದೆ.
2010ರ ಏಪ್ರಿಲ್ 10ರಂದು ಒಪ್ಪಂದ ನಡೆದಿತ್ತು. ಈ ಒಪ್ಪಂದದ ಹಿನ್ನೆಲೆಯಲ್ಲಿ ವಿವಾದ ಹುಟ್ಟಿಕೊಂಡಿದೆ. ಒಪ್ಪಂದ ಏನು ಎಂಬುದನ್ನು ಸಂಸ್ಥೆ ತಿಳಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರ ಏಪ್ರಿಲ್ 17ರಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿತ್ತು. ಈಗ ಅಕ್ಟೋಬರ್ 30ರೊಳಗೆ ಸಂಪೂರ್ಣ ಬಾಕಿ ಹಣವನ್ನು ತೀರಿಸುವಂತೆ ಆರ್ಜಿವಿಗೆ ಎಚ್ಚರಿಕೆ ನೀಡಲಾಗಿದೆ.
ಒಂದು ವೇಳೆ ಹಣ ಪಾವತಿಸಲು ವಿಫಲವಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ಎಚ್ಚರಿಸಿದೆ. ರಾಮ್ ಗೋಪಾಲ್ ವರ್ಮಾ ಅವರ ಮುಂಬರುವ ಸಿನಿಮಾಗಳು ಹಾಗೂ ಒಪ್ಪಂದದಡಿ ಬರುವ ಪ್ರಾಜೆಕ್ಟ್‌ಗಳ ಹಕ್ಕುಗಳ ಮೇಲೆ ತನ್ನ ಹಿಡಿತ ಸಾಧಿಸುವುದಾಗಿ ತಿಳಿಸಿದೆ. ಬಾಕಿ ಹಣ ಸಂಪೂರ್ಣವಾಗಿ ಪಾವತಿಯಾಗುವವರೆಗೆ ಯಾವುದೇ ಒಪ್ಪಿಗೆ ಇಲ್ಲದೆ ಮುಂದುವರಿಯದಂತೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ‘ಧುರಂಧರ್’ ಹೊಗಳುವ ನೆಪದಲ್ಲಿ ‘ಟಾಕ್ಸಿಕ್’ ತೆಗಳಿದ್ರಾ ರಾಮ್ ಗೋಪಾಲ್ ವರ್ಮಾ?
ನಿರ್ಮಾಪಕರು, ವಿತರಕರು ಹಾಗೂ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಯಾವುದೇ ವ್ಯವಹಾರ ನಡೆಸುವ ಮುನ್ನ ಎಚ್ಚರಿಕೆ ವಹಿಸಬೇಕು. ನಿರ್ಮಾಣ ಸಂಸ್ಥೆಯ ಪೂರ್ವಾನುಮತಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯದೆ ವ್ಯವಹರಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.