ಪ್ರತಿ ಬಾರಿ ಗಣೇಶ ಚತುರ್ಥಿ ಸಮಯದಲ್ಲಿ ಸಿನಿಮಾಗಳಿಂದ ಪ್ರೇರಣೆಗೊಂಡು ಗಣೇಶನ ಮೂರ್ತಿ ತಯಾರಿಸಲಾಗುತ್ತದೆ. ಈ ಮೊದಲು ‘ಜೋಗಿ’ ಗಣೇಶ, ‘ಬಾಹುಬಲಿ’ ಗಣಪ, ರಾಖಿ ಭಾಯ್ ಗಣಪನ ಮೂರ್ತಿಗಳು ಸುದ್ದಿ ಆಗಿದ್ದವು. ಈ ವರ್ಷ ‘ಪುಷ್ಪ 2’ ಗಣಪ ಲೇಟೆಸ್ಟ್ ಉದಾಹರಣೆ. ಹೌದು, ‘ಪುಷ್ಪ 2’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರ ಮಾದರಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಅಭಿಮಾನಿಗಳು ಹಬ್ಬ ಮಾಡಿದ್ದಾರೆ. ಅದರ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.
‘ಪುಷ್ಪ 2’ ಸಿನಿಮಾ ಮೇಲೆ ಜನರಿಗೆ ಸಖತ್ ನಿರೀಕ್ಷೆ ಇದೆ. ಸುಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷ ಡಿಸೆಂಬರ್ 6ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಹಾಡುಗಳು ಮತ್ತು ಟೀಸರ್ ಮೂಲಕ ಧೂಳೆಬ್ಬಿಸಲಾಗಿದೆ. ‘ಸೂಸೇಕಿ..’ ಹಾಡು ಬಿಡುಗಡೆ ಸಂದರ್ಭದಲ್ಲಿ ಒಂದು ಫೋಟೋ ಹಂಚಿಕೊಳ್ಳಲಾಗಿತ್ತು. ಆ ಫೋಟೋದಲ್ಲಿನ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅವರ ಗೆಟಪ್ ರೀತಿಯಲ್ಲಿ ಗಣಪನ ಮೂರ್ತಿ ಕೂರಿಸಲಾಗಿದೆ.
ವಿಶಾಖಪಟ್ಟಣದಲ್ಲಿ ಈ ಗಣೇಶನ ಮೂರ್ತಿಗೆ ಪೂಜೆ ಮಾಡಿದ ಅಲ್ಲು ಅರ್ಜುನ್ ಅಭಿಮಾನಿಗಳು ಸಡಗರದಿಂದ ಹಬ್ಬ ಆಚರಿಸಿದ್ದಾರೆ. ‘ಪುಷ್ಪ 2’ ಸಿನಿಮಾ ಮೇಲೆ ಜನರಿಗೆ ಎಷ್ಟು ಕ್ರೇಜ್ ಎಂಬುದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕೆಲಸಗಳು ಬಾಕಿ ಇರುವ ಕಾರಣ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಯಿತು.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಅಪಘಾತ; ಕ್ಷಣಿಕ ಜೀವನದ ಬಗ್ಗೆ ಮಾತನಾಡಿದ ‘ಪುಷ್ಪ 2’ ನಟಿ
ಬಿಗ್ ಬಜೆಟ್ನಲ್ಲಿ ‘ಪುಷ್ಪ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ. ‘ಪುಷ್ಪ’ ಹಿಟ್ ಆದ್ದರಿಂದ ಅದರ ಸೀಕ್ವೆಲ್ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ 2’ ಸಿನಿಮಾದ ರಿಲೀಸ್ ಬಳಿಕ ಬೇಡಿಕೆ ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.