AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Golden Star Ganesh: ಹಿಂದಿ ಟಿವಿ ಶೋನಲ್ಲಿ ಕನ್ನಡಿಗರ ಕೊಂಡಾಡಿದ ನಟ ಗಣೇಶ್

ನಟ ಗೋಲ್ಡನ್ ಸ್ಟಾರ್ ಗಣೇಶ್ ಹಿಂದಿಯ ಕಪಿಲ್ ಶರ್ಮಾ ಶೋನಲ್ಲಿ ತಮ್ಮ ಅಭಿಮಾನಿಗಳು ಹಾಗೂ ಕನ್ನಡಿಗರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

Golden Star Ganesh: ಹಿಂದಿ ಟಿವಿ ಶೋನಲ್ಲಿ ಕನ್ನಡಿಗರ ಕೊಂಡಾಡಿದ ನಟ ಗಣೇಶ್
ಗಣೇಶ್
Follow us
ಮಂಜುನಾಥ ಸಿ.
|

Updated on:Feb 26, 2023 | 4:39 PM

ಪ್ಯಾನ್ ಇಂಡಿಯಾ ಸಿನಿಮಾದಿಂದಾಗಿ ಪ್ರಾದೇಶಿಕ ಸಿನಿಮಾ ರಂಗಗಳ ನಡುವೆ ಇದ್ದ ಅಂತರ ಕಡಿಮೆಯಾಗಿದ್ದು, ಬೇರೆ ಬೇರೆ ಭಾಷೆಯ ನಟರು ಬೇರೆ ಬೇರೆ ಭಾಷೆಯ ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಕನ್ನಡದ ನಟರಾದ ಯಶ್, ರಿಷಬ್ ಶೆಟ್ಟಿ, ಸುದೀಪ್ ಅವರುಗಳು ಈಗಾಗಲೇ ತಮ್ಮ ಸಿನಿಮಾಗಳ ಪ್ರಚಾರಕ್ಕಾಗಿ ಪ್ಯಾನ್ ಇಂಡಿಯಾ (Pan India) ಸುತ್ತು ಹೊಡೆದು ಬಂದಿದ್ದಾರೆ. ಹಿಂದಿಯ ಜನಪ್ರಿಯ ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕ್ರಿಕೆಟ್ ಕಾರಣಕ್ಕೆ ಹಿಂದಿ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅಲ್ಲಿ ಕನ್ನಡಿಗರನ್ನು, ತಮ್ಮ ಅಭಿಮಾನಿಗಳನ್ನು ಕೊಂಡಾಡಿದ್ದಾರೆ.

ಭಾರತದ ಹಲವು ಚಿತ್ರರಂಗದ ನಟರು ಸೇರಿ ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಈ ವರ್ಷವೂ ನಡೆಯುತ್ತಿದ್ದು, ಇದರ ಪ್ರಚಾರಾರ್ಥ ಸಿಸಿಎಲ್ ಆಡುವ ಬೇರೆ ಬೇರೆ ಭಾಷೆಯ ನಟರುಗಳು ಹಿಂದಿಯ ಜನಪ್ರಿಯ ಟಾಕ್ ಶೋ ‘ದಿ ಕಪಿಲ್ ಶರ್ಮಾ ಶೋ‘ನಲ್ಲಿ ಭಾಗವಹಿಸಿದ್ದರು. ಕರ್ನಾಟಕ ಬುಲ್ಡೋಜರ್ಸ್​ ತಂಡದ ಪ್ರತಿನಿಧಿಯಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಶೋಗೆ ಹೋಗಿದ್ದರು.

ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ತಮ್ಮ ಪ್ರೇಕ್ಷಕರಿಗೆ ಪರಿಚಯಿಸುವುದು ಶೋನ ನಿರೂಪಕರಾದ ಕಪಿಲ್ ಶರ್ಮಾ ಅವರ ವಿಧಾನ, ಅಂತೆಯೇ ಗಣೇಶ್ ಅವರ ಪರಿಚಯ ಮಾಡಿಸಿದ ಬಳಿಕ, ನಿಮ್ಮನ್ನು ಗೋಲ್ಡನ್ ಸ್ಟಾರ್ ಎಂದು ಏಕೆ ಕರೆಯುತ್ತಾರೆ? ನೀವು ಎಷ್ಟು ಕ್ಯಾರೆಟ್ ಗೋಲ್ಡ್ ಎಂದು ತಮಾಷೆಗೆ ಕಾಲೆಳೆದರು.

ಕಪಿಲ್​ರ ಪ್ರಶ್ನೆಗೆ ಉತ್ತರಿಸಿದ ಗಣೇಶ್, ”2003-04 ರಲ್ಲಿ ನಾನು ಕಾಮಿಡಿ ಟೈಮ್ ಹೆಸರಿನ ಟಿವಿ ಶೋ ಮಾಡುತ್ತಿದ್ದೆ. ಅದು ಬಹಳ ಜನಪ್ರಿಯವಾಯ್ತು. ಆ ನಂತರ ನಾನು ಸಿನಿಮಾಗಳಿಗೆ ಬಂದೆ. ನಾನು ಆರಂಭದಲ್ಲಿ ಮಾಡಿದ ಸಿನಿಮಾಗಳು ಒಂದರ ಹಿಂದೆ ಒಂದು ಹಿಟ್ ಆದವು. ಹಾಗಾಗಿ ಜನ ನನ್ನನ್ನು ಗೋಲ್ಡನ್ ಸ್ಟಾರ್ ಎಂದು ಕರೆದರು. ಆದರೆ ನಿಜವಾಗಿಯೂ ನಾನು ಗೋಲ್ಡನ್ ಸ್ಟಾರ್ ಅಲ್ಲ, ನನ್ನನ್ನು ಈ ಎತ್ತರಕ್ಕೆ ಏರಿಸಿದ ಜನ ಗೋಲ್ಡನ್ ಸ್ಟಾರ್​ಗಳು” ಎಂದರು. ಮುಂದುವರೆದು, ”ನೀವು ಕೇಳಿದಿರಿ, ನೀವು ಎಷ್ಟು ಕ್ಯಾರೆಟ್ ಚಿನ್ನ ಎಂದು, ಜನ ನನ್ನನ್ನು ಎಷ್ಟು ಪ್ರೀತಿಸುತ್ತಾರೋ ನಾನು ಅಷ್ಟು ಕ್ಯಾರೆಟ್ ಚಿನ್ನ” ಎಂದಿದ್ದಾರೆ ಗಣೇಶ್. ನಟನ ಉತ್ತರಕ್ಕೆ ಕಪಿಲ್ ಶರ್ಮಾ ಸೇರಿದಂತೆ ನೆರೆದಿದ್ದವರೆಲ್ಲ ಚಪ್ಪಾಳೆ ತಟ್ಟಿದ್ದಾರೆ.

ಇನ್ನು ಕಾರ್ಯಕ್ರಮದ ನಡುವೆ ಭೊಜ್​ಪುರಿ ಚಿತ್ರರಂಗದ ಹಿರಿಯ ನಟ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷರೂ ಆಗಿರುವ ಮನೋಜ್ ತಿವಾರಿ ಮಾತನಾಡುತ್ತಾ, ”ಸಿಸಿಎಲ್​ನಲ್ಲಿ ಕೆಲವರು ಇದ್ದಾರೆ ಒಂದರ ಹಿಂದೆ ಒಂದು ಸಿಕ್ಸ್​ ಹೊಡೆಯುತ್ತಲೇ ಇರುತ್ತಾರೆ. ಅಷ್ಟೋಂದು ಒಳ್ಳೆಯ ಆಟಗಾರರಾಗಿದ್ದರೆ ರಣಜಿಯಲ್ಲಿ ಹೋಗಿ ಆಡಲಿ” ಎನ್ನುತ್ತಾರೆ. ಆಗ ಕಪಿಲ್ ಶರ್ಮಾ,” ಸಿಸಿಎಲ್​ನಲ್ಲಿ ಯಾರು ಜಾಸ್ತಿ ಸಿಕ್ಸ್ ಹೊಡೆಯುತ್ತಾರೆ” ಎಂದಾಗ ಮನೋಜ್ ತಿವಾರಿ, ಕರ್ನಾಟಕದಲ್ಲಿ ಪ್ರದೀಪ್ ಎಂಬುವರು ಜಾಸ್ತಿ ಹೊಡೆಯುತ್ತಾರೆ ಎನ್ನುತ್ತಾರೆ.

ಆಗ ಮಧ್ಯ ಪ್ರವೇಶಿಸುವ ನಟ ಗಣೇಶ್, ”ನೋಡಿ ಸರ್, ನಾವು ಗೇಮ್ ಅನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇವೆ ಮತ್ತು ಆಡುತ್ತೇವೆ. ಮನೋಜ್ ಅವರು ಹೇಳಿದರು, ಅಷ್ಟೋಂದು ಚೆನ್ನಾಗಿ ಆಡುವಂತಿದ್ದರೆ ರಣಜಿಗೆ ಹೋಗಲಿ ಎಂದು, ನಾವು ರಣಜಿಗೆ ಹೋಗಿದ್ದೆವು, ಅಲ್ಲಿ ಅವಕಾಶ ಸಿಗದೇ ಇರುವ ಕಾರಣಕ್ಕೇ ಈಗ ನಟರಾಗಿದ್ದೇವೆ” ಎಂದು ಚಟಾಕಿ ಹಾರಿಸಿದ್ದಾರೆ.

ಕೆಲವು ದಿನಗಳಿಂದಲೂ ಸಿಸಿಎಲ್ ಟೂರ್ನಿ ನಡೆಯುತ್ತಿದ್ದು ಇಂದು (ಫೆಬ್ರವರಿ 26) ಕರ್ನಾಟಕ ಬುಲ್ಡೋಜರ್ಸ್ ತಂಡದವರು ಕೇರಳ ತಂಡದ ವಿರುದ್ಧ ಆಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sun, 26 February 23