
ಕರ್ನಾಟಕ ಸರ್ಕಾರದ ಆದೇಶದಿಂದಾಗಿ ತೆಲುಗು ಸಿನಿಮಾ ಪ್ರೇಮಿಗಳಿಗೆ ಬರೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಅವರು ಏಕರೂಪ ಸಿನಿಮಾ ಟಿಕೆಟ್ ಬೆಲೆ ಕುರಿತಾಗಿ ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಅದರ ಗೆಜೆಟ್ ಆದೇಶರೂಪ ಹೊರಬೀಳಲಿದೆ. ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ (Multiplex) ಸೇರಿದಂತೆ ಎಲ್ಲ ಚಿತ್ರಮಂದಿರಗಳ ಟಿಕೆಟ್ ಬೆಲೆ 200 ರೂಪಾಯಿ ಮೀರುವಂತಿಲ್ಲ. ಇದು ರಾಜ್ಯದ ಸಿನಿಮಾ ಪ್ರೇಮಿಗಳಿಗೆ ಖುಷಿ ತಂದಿದೆ. ಆದರೆ ಈ ಆದೇಶದಿಂದ ತೆಲುಗು ಸಿನಿಮಾ ಪ್ರೇಕ್ಷಕರು ಸಂಕಷ್ಟ ಎದುರಿಸುವಂತಾಗಿದೆ.
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಮುಂದಿನ ಗುರುವಾರ (ಜುಲೈ 24) ದಂದು ಬಿಡುಗಡೆ ಆಗಲಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಆಂಧ್ರ, ತೆಲಂಗಾಣಗಳ ಜೊತೆಗೆ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿಯೂ ಸಹ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ. ಆದರೆ ಕರ್ನಾಟಕ ಸರ್ಕಾರ ಏಕರೂಪ ಸಿನಿಮಾ ಟಿಕೆಟ್ ದರ ತರಲು ಮುಂದಾಗಿರುವ ಕಾರಣ ಈಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಅನ್ನು ಹೆಚ್ಚಿನ ದರ ಹಣ ನೀಡಿ ಆಂಧ್ರ-ತೆಲುಗು ಪ್ರೇಕ್ಷಕರು ನೋಡಬೇಕಾಗಿದೆ.
ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆದಾಗ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಸಿನಿಮಾಗಳ ಟಿಕೆಟ್ ದರ ಹೆಚ್ಚಳ ಮಾಡುವುದು ಸಾಮಾನ್ಯ. ಇದಕ್ಕೆ ಆಯಾ ಸರ್ಕಾರದ ಅನುಮತಿಯನ್ನು ಪಡೆಯಬೇಕಿರುತ್ತದೆ. ಆದರೆ ಪವನ್ ಕಲ್ಯಾಣ್, ಉಪಮುಖ್ಯಮಂತ್ರಿ ಆಗಿದ್ದು, ಜನಾನುರಾಗಿ ಎಂದು ಸಹ ಗುರುತಿಸಿಕೊಂಡಿದ್ದಾರೆ. ತಮ್ಮ ಈ ಇಮೇಜಿಗೆ ಪುಷ್ಠಿ ನೀಡಲೆಂದು ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ದರ ಹೆಚ್ಚಳ ಮಾಡದೆ ಆಂಧ್ರ ಮತ್ತು ತೆಲಂಗಾಣದಲ್ಲಿ ಪವನ್ ಬಿಡುಗಡೆ ಮಾಡಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಹರಿದಾಡಿತ್ತು.
ಇದನ್ನೂ ಓದಿ:‘ಹರಿ ಹರ ವೀರ ಮಲ್ಲು’ ಟ್ರೈಲರ್ ಬಿಡುಗಡೆ: ಧರ್ಮದ ಯುದ್ಧದಲ್ಲಿ ಪವನ್
‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿ ಪವನ್ ಅವರನ್ನು ಹಿಂದೂ ಧರ್ಮ ರಕ್ಷಕನಂತೆ ತೋರಿಸಿದ್ದು, ಅವರ ರಾಜಕೀಯ ಇಮೇಜಿಗೆ ಸೂಟ್ ಆಗುವಂತೆ ಕತೆ, ಸಂಭಾಷಣೆ ‘ಹರಿ ಹರ ವೀರ ಮಲ್ಲು’ ಸಿನಿಮಾನಲ್ಲಿದೆ. ಪವನ್ ಅವರ ರಾಜಕೀಯ ಇಮೇಜಿಗೆ ಬೂಸ್ಟ್ ಕೊಡಬಹುದಾದ ಸಿನಿಮಾ ಸಹ ಇದಾಗಿರುವ ಕಾರಣಕ್ಕೆ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಿಸದೆ ಎಲ್ಲರೂ ನೋಡಲು ಅನುಕೂಲವಾಗುವಂತೆ ಕಡಿಮೆ ಟಿಕೆಟ್ ದರದಲ್ಲಿಯೇ ಸಿನಿಮಾ ಅನ್ನು ಬಿಡುಗಡೆ ಮಾಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು.
ಆದರೆ ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಮಾತ್ರ ಕರ್ನಾಟಕ ರಾಜ್ಯ ಸರ್ಕಾರ. ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಆದೇಶದಿಂದಾಗಿ ಇಲ್ಲಿ ‘ಹರಿ ಹರ ವೀರ ಮಲ್ಲು’ ಸಿನಿಮಾ ಟಿಕೆಟ್ ಅನ್ನು ಹೆಚ್ಚಿನ ಬೆಲೆಗೆ ಮಾರಲಾಗದು, ಇದರಿಂದಾಗಿ ರಾಜ್ಯದಿಂದ ಬರುತ್ತಿದ್ದ ಆದಾಯದಲ್ಲಿ ಶೇ50% ಕಡಿತಗೊಳ್ಳಲಿದೆ. ಆ ನಷ್ಟವನ್ನು ಸರಿತೂಗಿಸಲು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಇಷ್ಟವಿಲ್ಲದಿದ್ದರೂ ‘ಹರಿ ಹರ ವೀರ ಮಲ್ಲು’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಸಿನಿಮಾ ಜುಲೈ 24 ರಂದು ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ