ಸದ್ದಿಲ್ಲದೆ ಸಿನಿಮಾ ಶೂಟ್ ಮಾಡಲು ಹೋಗಿ ತೀವ್ರ ಗಾಯ ಮಾಡಿಕೊಂಡ ಶಾರುಖ್ ಖಾನ್
ಶಾರುಖ್ ಖಾನ್ ಅವರು ತಮ್ಮ ಹೊಸ ಚಿತ್ರ 'ಕಿಂಗ್'ನ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಮತ್ತು ಅವರು ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ. 'ಪಠಾಣ್', 'ಜವಾನ್' ಮತ್ತು 'ಡಂಕಿ' ಚಿತ್ರಗಳ ಯಶಸ್ಸಿನ ನಂತರ ಈ ಘಟನೆ ನಡೆದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಶಾರುಖ್ ಖಾನ್ ಅವರು ಸದ್ಯ ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾದ ಶೂಟ್ ಕೂಡ ಆರಂಭ ಆಗಿತ್ತು. ಆದರೆ, ಶೂಟಿಂಗ್ ವೇಳೆ ಉಂಟಾದ ಎಡವಟ್ಟಿನಿಂದ ಅವರಿಗೆ ಗಾಯ ಆಗಿದೆ. ಈ ಕಾರಣಕ್ಕೆ ಅವರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಹೀಗಾಗಿ, ‘ಕಿಂಗ್’ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ಈಗ ಶಾರುಖ್ (Shah Rukh Khan) ಅವರು ಅಮೆರಿಕಕ್ಕೆ ತೆರಳುತ್ತಾರೆ ಎಂಬ ವರದಿ ಕೂಡ ಇದೆ.
ಶಾರುಖ್ ಖಾನ್ ಅವರು 2023ರಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟರು. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಹಿಟ್ ಆದವು. ಆ ಬಳಿಕ ಶಾರುಖ್ ಖಾನ್ ಯಾವುದೇ ಸಿನಿಮಾನ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ಅವರು ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ. ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಇದ್ದಾರೆ.
ಈ ಸಿನಿಮಾ ಶೂಟಿಂಗ್ ಇತ್ತೀಚೆಗೆ ಮುಂಬೈನ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸದ್ದಿಲ್ಲದೆ ಶೂಟ್ ಮಾಡಲಾಗುತ್ತಿತ್ತು. ಈ ವೇಳೆ ಶಾರುಖ್ ಖಾನ್ ಅವರು ಸ್ಟಂಟ್ ಮಾಡುತ್ತಿದ್ದರು. ಆಗ ಅವರಿಗೆ ಮಸಲ್ ಇಂಜೂರಿ ಆಗಿದೆ.
ಶಾರುಖ್ ಖಾನ್ಗೆ ಗಂಭೀರ ಸಮಸ್ಯೆ ಏನೂ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅವರು ಅಮೆರಿಕಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲಿದ್ದಾರಂತೆ. ಶಾರುಖ್ ಖಾನ್ಗೆ ವಯಸ್ಸು 60 ಸಮೀಪಿಸಿದೆ. ಈ ಸಂದರ್ಭದಲ್ಲಿ ಗಾಯಗೊಂಡರೆ ರಿಕವರಿ ಆಗೋಕೆ ಸಾಕಷ್ಟು ಸಮಯ ಬೇಕಿದೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ.
ಇದನ್ನೂ ಓದಿ: ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್
‘ಕಿಂಗ್’ ಸಿನಿಮಾ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಹೊಸ ಶೆಡ್ಯೂಲ್ನಲ್ಲಿ ಶೂಟ್ ಮಾಡಲು ಸಿದ್ಧತೆ ನಡೆದಿದೆ. ಅವರು ಸಂಪೂರ್ಣ ರಿಕವರಿ ಆದ ಬಳಿಕವೇ ಬರಲಿದ್ದಾರೆ. ಫಿಲ್ಮ್ ಸಿಟಿ, ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋ ಹಾಗೂ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋನ ಬುಕ್ ಮಾಡಲಾಗಿತ್ತು. ಅದು ಈಗ ಕ್ಯಾನ್ಸಲ್ ಆಗಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಇದೆ. ದೀಪಿಕಾ ಕೂಡ ಈ ಚಿತ್ರದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:36 pm, Sat, 19 July 25








