ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್
ಈಗ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಆದರೆ ಮೊದಲು ಹಾಗಿರಲಿಲ್ಲ. ಒಂದು ಕಾಲದಲ್ಲಿ ಆಮಿರ್ ಖಾನ್ ಬಗ್ಗೆ ಶಾರುಖ್ ಖಾನ್ ಅವರಿಗೆ ಅಸಮಾಧಾನ ಇತ್ತು. ಫ್ಯಾನ್ಸ್ ಕೂಡ ಗರಂ ಆಗಿದ್ದರು. ಆಮಿರ್ ಖಾನ್ ಅವರು ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದು ವಿವಾದಕ್ಕೆ ಕಾರಣ ಆಗಿತ್ತು.

ಸಲ್ಮಾನ್ ಖಾನ್, ಆಮಿರ್ ಖಾನ್, ಶಾರುಖ್ ಖಾನ್ (Shah Rukh Khan) ನಡುವೆ ಉತ್ತಮವಾದ ಸ್ನೇಹ ಇದೆ. ಹಲವು ವರ್ಷಗಳಿಂದ ಅವರೆಲ್ಲ ಸ್ನೇಹಿತರಾಗಿದ್ದಾರೆ. ಈ ಮೂವರ ನಡುವೆ ಸ್ಪರ್ಧೆ ಕೂಡ ಇದೆ. ಆರಂಭದ ದಿನಗಳಲ್ಲಿ ಕೆಲವು ವಿವಾದಗಳನ್ನು ಕೂಡ ಮಾಡಿಕೊಂಡಿದ್ದರು. ಈಗ ಯಾವುದೇ ಕಿರಿಕ್ ಇಲ್ಲದೇ ಆರಾಮಾಗಿ ಇದ್ದಾರೆ. ಆದರೆ ಹಳೇ ದಿನಗಳ ವಿವಾದ ಆಗಾಗ ನೆನಪಾಗುತ್ತಾ ಇರುತ್ತದೆ. ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಗೆಲುವಿನ ಖುಷಿಯಲ್ಲಿ ಇರುವ ಆಮಿರ್ ಖಾನ್ (Aamir Khan) ಅವರು ಶಾರುಖ್ ಖಾನ್ ಜೊತೆಗಿನ ವಿವಾದಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಒಂದು ಕಹಿ ಘಟನೆ ನೆನಪಾಗಿದೆ.
ಬಹಳ ವರ್ಷಗಳ ಹಿಂದೆ ಆಮಿರ್ ಖಾನ್ ಅವರು ತಮ್ಮ ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದರು! ಈ ವಿಷಯ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣ ಆಗಿತ್ತು. ಆಮಿರ್ ಖಾನ್ ಅವರ ಈ ವರ್ತನೆಯಿಂದ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತುಂಬಾ ನೋವಾಗಿತ್ತು. ಆ ಸಮಯದಲ್ಲಿ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ನಡುವೆ ಮುನಿಸು ಸೃಷ್ಟಿ ಆಗಿತ್ತು.
2010ರ ಸಮಯದಲ್ಲಿ ಆಮಿರ್ ಖಾನ್ ಅವರು ಬ್ಲಾಗ್ ಬರೆಯುತ್ತಿದ್ದರು. ‘ಶಾರುಖ್ ನನ್ನ ಕಾಲು ನೆಕ್ಕುತ್ತಿದ್ದಾನೆ. ನಾನು ಅವನಿಗೆ ಬಿಸ್ಕೆಟ್ ತಿನಿಸುತ್ತಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ’ ಎಂದು ಆಮಿರ್ ಖಾನ್ ಬರೆದಿದ್ದರು. ಇದರಿಂದ ವಿವಾದ ಶುರುವಾಗಿತ್ತು. ಇಂಥ ವರ್ತನೆ ತೋರಿಸಿದಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಬಳಿಕ ಆಮಿರ್ ಖಾನ್ಗೆ ತಮ್ಮ ತಪ್ಪಿನ ಅರಿವಾಯಿತು.
ನಂತರ ಈ ಕುರಿತು ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ಅವರು ಮಾತನಾಡಿದರು. ಆಮಿರ್ ಖಾನ್ ಅವರು ಆ ನಾಯಿಯನ್ನು ಬೇರೆಯವರಿಂದ ಖರೀದಿಸಿದ್ದರು. ಆ ಮಾಲಿಕರು ನಾಯಿಗೆ ಆ ರೀತಿ ಹೆಸರು ಇಟ್ಟಿದ್ದರು. ಈ ಎಲ್ಲ ಘಟನೆಯನ್ನು ಅವರು ತಮಾಷೆಯಾಗಿ ವಿವರಿಸಿದ್ದರು ಕೂಡ ಅಭಿಮಾನಿಗಳು ಗರಂ ಆಗಿದ್ದರು. ಆದ್ದರಿಂದ ಆಮಿರ್ ಖಾನ್ ಅವರು ಶಾರುಖ್ ಖಾನ್ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದರು. ಅಲ್ಲದೇ ಶಾರುಖ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಬಳಿಯೂ ಕ್ಷಮೆ ಕೇಳಿದ್ದರು.
ಇದನ್ನೂ ಓದಿ: ರಾಷ್ಟ್ರಪತಿಗೆ ‘ಸಿತಾರೆ ಜಮೀನ್ ಪರ್’ ಸಿನಿಮಾ ತೋರಿಸಿದ ಆಮಿರ್ ಖಾನ್
ಹೀಗೆ ಪ್ರಾರಂಭದ ದಿನಗಳಲ್ಲಿ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರು ಪರಸ್ಪರ ಕಮೆಂಟ್ ಮಾಡಿಕೊಳ್ಳುತ್ತಿದ್ದರು. ‘ನಾನು ನನ್ನ ಸಂದರ್ಶನಗಳಲ್ಲಿ ಬೇರೆಯವರ ಬಗ್ಗೆ ಮಾತನಾಡುವುದಿಲ್ಲ’ ಎಂದು ಆಮಿರ್ ಖಾನ್ ಹೇಳಿದರು. ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಆಮಿರ್ ಖಾನ್ ಹೋಗುವುದಿಲ್ಲ. ಆದರೆ ಅನೇಕ ಅವಾರ್ಡ್ ಫಂಕ್ಷನ್ಗಳಲ್ಲಿ ಶಾರುಖ್ ಖಾನ್ ಅವರು ಆಮಿರ್ ಖಾನ್ ಬಗ್ಗೆ ಲೇವಡಿ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








