ಹೊಸ ಹೀರೋಗೆ ಹೆದರಿದ ಅಜಯ್ ದೇವಗನ್? ಕೊನೇ ಕ್ಷಣದಲ್ಲಿ ಸಿನಿಮಾ ಮುಂದೂಡಿಕೆ
ಜುಲೈ 25ರಂದು ಬಿಡುಗಡೆ ಆಗಬೇಕಿದ್ದ ‘ಸನ್ ಆಫ್ ಸರ್ದಾರ್ 2’ ಸಿನಿಮಾವನ್ನು ಆಗಸ್ಟ್ 1ಕ್ಕೆ ಮುಂದೂಡಲಾಗಿದೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಮೃಣಾಲ್ ಠಾಕೂರ್, ಸಂಜಯ್ ಮಿಶ್ರಾ ಮುಂತಾದವರು ಅಭಿನಯಿಸಿದ್ದಾರೆ. ಕೊನೇ ಕ್ಷಣದಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದರಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಅದಕ್ಕೆ ಕಾರಣ ಏನು?

ಬಾಲಿವುಡ್ನ ‘ಸನ್ ಆಫ್ ಸರ್ದಾರ್ 2’ (Son of Sardaar 2) ಸಿನಿಮಾ ನೋಡಲು ಕಾದಿದ್ದ ಅಜಯ್ ದೇವಗನ್ (Ajay Devgn) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಜುಲೈ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷೆ ಮಾಡಿದ್ದರು. ಅದಕ್ಕೆ ಚಿತ್ರತಂಡ ಕೂಡ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೊನೇ ಕ್ಷಣದಲ್ಲಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜುಲೈ 25ರ ಬದಲಿಗೆ ಆಗಸ್ಟ್ 1ರಂದು ಸಿನಿಮಾ ತೆರೆಕಾಣಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಅಚ್ಚರಿ ಏನೆಂದರೆ, ಈ ಬದಲಾವಣೆಗೆ ಹೊಸ ಹೀರೋ ನಟನೆಯ ‘ಸೈಯಾರಾ’ (Saiyaara) ಸಿನಿಮಾದ ಪೈಪೋಟಿಯೇ ಕಾರಣ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಸಿನಿಮಾದ ಬಿಡುಗಡೆಗೆ ಕೇವಲ 6 ದಿನ ಬಾಕಿ ಇದೆ ಎನ್ನುವಾಗ ರಿಲೀಸ್ ದಿನಾಂಕ ಬದಲಾವಣೆ ಮಾಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಗುಸುಗುಸು ಹಬ್ಬಿದೆ. ಕೊನೇ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವ ಕಾರಣದಿಂದ ಈ ರೀತಿ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಸಲಿ ಕಾರಣ ಬೇರೆಯೇ ಇದೆ ಎಂಬುದು ಜನರ ಅಭಿಪ್ರಾಯ.
ಜುಲೈ 18ರಂದು ಅಹಾನ್ ಪಾಂಡೆ ನಟನೆಯ ‘ಸೈಯಾರಾ’ ಸಿನಿಮಾ ಬಿಡುಗಡೆ ಆಗಿದೆ. ಮೋಹಿತ್ ಸೂರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದರೂ ಕೂಡ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 21.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಈ ಸಿನಿಮಾದ ಎದುರು ಪೈಪೋಟಿ ನೀಡಲು ಅಜಯ್ ದೇವಗನ್ ಹೆದರಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
2ನೇ ದಿನ ಕೂಡ ‘ಸೈಯಾರಾ’ ಭರ್ಜರಿ ಕಲೆಕ್ಷನ್ ಮಾಡಿದೆ. ವರದಿಗಳ ಪ್ರಕಾರ, ಜುಲೈ 19ರಂದು ಈ ಸಿನಿಮಾಗೆ 24 ಕೋಟಿ ರೂಪಾಯಿ ಕಮಾಯಿ ಆಗಿದೆ. ಅಂದರೆ ಕೇವಲ 2 ದಿನಕ್ಕೆ ಚಿತ್ರದ ಒಟ್ಟು ಕಲೆಕ್ಷನ್ 45 ಕೋಟಿ ರೂಪಾಯಿ ಆಗಿದೆ. ಹಾಗಾಗಿ 2ನೇ ವೀಕೆಂಡ್ನಲ್ಲಿ ಕೂಡ ಈ ಸಿನಿಮಾದ ಹವಾ ಜೋರಾಗಿಯೇ ಇರಲಿದೆ. ಆ ಕಾರಣದಿಂದ ಅಜಯ್ ದೇವಗನ್ ಅವರು ಕ್ಲ್ಯಾಶ್ ತಪ್ಪಿಸಲು ‘ಸನ್ ಆಫ್ ಸರ್ದಾರ್ 2’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಜಯ್ ದೇವಗನ್ ಕುಡಿಯೋ ವಿಸ್ಕಿ ಬೆಲೆ ಎಷ್ಟು? ಆ ದುಡ್ಡಲ್ಲಿ ಒಂದು ಬೈಕ್ ಖರೀದಿಸಬಹುದು
ಕಾಮಿಡಿ ಕಹಾನಿ ಇರುವ ‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ಮೃಣಾಲ್ ಠಾಕೂರ್, ರವಿ ಕಿಶನ್, ಖುಬ್ರಾ ಸೇಠ್, ಚಂಕಿ ಪಾಂಡೆ, ಶರತ್ ಸಕ್ಸೇನಾ, ಸಂಜಯ್ ಮಿಶ್ರಾ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಕುಮಾರ್ ಅರೋರಾ ಅವರು ನಿರ್ದೇಶನ ಮಾಡಿದ್ದಾರೆ. ಸ್ವತಃ ಅಜಯ್ ದೇವಗನ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








