ಚಿತ್ರೀಕರಣದ ವೇಳೆ ಶೂಟ್ ಮಾಡಿದ ನಟ; ಛಾಯಾಗ್ರಾಹಕಿ ನಿಧನ; ನಿರ್ದೇಶಕನಿಗೆ ಗಂಭೀರ ಗಾಯ
‘ರಸ್ಟ್’ ಸಿನಿಮಾದ ಚಿತ್ರೀಕರಣ ನ್ಯೂ ಮೆಕ್ಸಿಕೋದಲ್ಲಿ ನಡೆಯುತ್ತಿತ್ತು. ಶೂಟಿಂಗ್ ಸಲುವಾಗಿ ಗನ್ ಬಳಸಲಾಗುತ್ತಿತ್ತು. ಈ ಸಂದರ್ಭದಲ್ಲಿ ನಟ ಅಲೆಕ್ ಬಾಲ್ಡ್ವಿನ್ ಅವರು ಶೂಟ್ ಮಾಡಿದ್ದಾರೆ. ಪರಿಣಾಮವಾಗಿ ಸಿನಿಮಾಟೋಗ್ರಾಫರ್ ಸಾವು ಸಂಭವಿಸಿದೆ.
ಸಾಹಸ ದೃಶ್ಯಗಳ ಶೂಟಿಂಗ್ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕೊಂಚ ಮೈ ಮರೆತಿದ್ದಕ್ಕೆ ಪ್ರಾಣ ಹಾನಿ ಆದ ಉದಾಹರಣೆ ಕನ್ನಡ ಚಿತ್ರರಂಗದಲ್ಲೂ ಇದೆ. ಹಾಲಿವುಡ್ ಸಿನಿಮಾ ಶೂಟಿಂಗ್ ವೇಳೆ ಇಂಥದ್ದೊಂದು ಅಚಾತುರ್ಯ ನಡೆದಿದೆ. ನಟ ಅಲೆಕ್ ಬಾಲ್ಡ್ವಿನ್ ಅವರು ಕಣ್ತಪ್ಪಿನಿಂದಾಗಿ ಶೂಟ್ ಮಾಡಿದ್ದು, ಬಂದೂಕಿಂದ ಗುಂಡು ಸಿಡಿದಿದೆ. ಪರಿಣಾಮವಾಗಿ ಸಿನಿಮಾದ ಛಾಯಾಗ್ರಾಹಕಿ ಹಲೀನಾ ಹಚಿನ್ಸ್ ನಿಧನರಾಗಿದ್ದು, ನಿರ್ದೇಶಕ ಜೌಲ್ ಸೋಜಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ರಸ್ಟ್’ ಸಿನಿಮಾದ ಚಿತ್ರೀಕರಣ ನ್ಯೂ ಮೆಕ್ಸಿಕೋದಲ್ಲಿ ನಡೆಯುತ್ತಿತ್ತು. ಶೂಟಿಂಗ್ ಸಲುವಾಗಿ ಗನ್ ಬಳಸಲಾಗುತ್ತಿತ್ತು. ಈ ಸಂದರ್ಭದಲ್ಲಿ ನಟ ಅಲೆಕ್ ಬಾಲ್ಡ್ವಿನ್ ಅವರು ಶೂಟ್ ಮಾಡಿದ್ದಾರೆ. ಇದರಿಂದ 42ರ ಪ್ರಾಯದ ಸಿನಿಮಾಟೋಗ್ರಾಫರ್ ಹಲೀನಾ ಹಚಿನ್ಸ್ ಮತ್ತು 48ರ ಪ್ರಾಯದ ನಿರ್ದೇಶಕ ಜೌಲ್ ಸೋಜಾ ಅವರಿಗೆ ಬುಲೆಟ್ ತಗುಲಿತು. ಕೂಡಲೇ ಹಲೀನಾ ಹಚಿನ್ಸ್ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವ ವೇಳೆಗಾಗಲೇ ಹಲೀನಾ ಹಚಿನ್ಸ್ ನಿಧನ ಹೊಂದಿದ್ದರು. ಪ್ರಸ್ತುತ ಜೌಲ್ ಸೋಜಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಈ ಘಟನೆಯಿಂದ ಇಡೀ ತಂಡ ಆಘಾತಕ್ಕೆ ಒಳಗಾಗಿದೆ. ಹಲೀನಾ ಹಚಿನ್ಸ್ ನಿಧನಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ’ ಎಂದು ನಿರ್ಮಾಣ ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದಾರೆ. ಈ ದುರ್ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ನಟ ಅಲೆಕ್ ಬಾಲ್ಡ್ವಿನ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ಅವರ ಮೇಲೆ ಯಾವುದೇ ಕೇಸ್ ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಸೂಕ್ತ ತನಿಖೆ ನಡೆದ ನಂತರವೇ ಈ ಘಟನೆಯ ಅಸಲಿಯತ್ತು ಹೊರಬರಲಿದೆ.
ಶೂಟಿಂಗ್ ಸಂದರ್ಭದಲ್ಲಿ ದೃಶ್ಯಗಳು ನೈಜವಾಗಿ ಬರಲಿ ಎಂಬ ಕಾರಣ ಕೆಲವೊಮ್ಮೆ ಅಸಲಿ ಗನ್ಗಳನ್ನು ಬಳಸಲಾಗುತ್ತದೆ. ಅದಕ್ಕೆ ಸೂಕ್ತ ನಿಯಮಾವಳಿಗಳನ್ನು ಅನುಸರಿಸಬೇಕು. ಆದರೂ ಕೂಡ ಕೆಲವೊಮ್ಮೆ ಇಂಥ ಅಚಾತುರ್ಯಗಳು ನಡೆದುಬಿಡುತ್ತವೆ. ಅದರಿಂದ ಜೀವಕ್ಕೆ ಕುತ್ತು ಬರುತ್ತದೆ. 1993ರಲ್ಲಿ ಖ್ಯಾತ ನಟ ಬ್ರೂಸ್ ಲೀ ಅವರ ಪುತ್ರ ಬ್ರಾಂಡನ್ ಬ್ರೂಸ್ ಲೀ ಕೂಡ ಇದೇ ರೀತಿ ಅವಘಡದಿಂದ ನಿಧನರಾದರು. ಶೂಟಿಂಗ್ ವೇಳೆ ಬುಲೆಟ್ ಸಿಡಿದು ಅವರು ಕೊನೆಯುಸಿರು ಎಳೆದರು.
ಇದನ್ನೂ ಓದಿ:
Upendra: ನಟ ಉಪೇಂದ್ರ ತಲೆಗೆ ರಾಡ್ನಿಂದ ಪೆಟ್ಟು! ಕಬ್ಜ ಸಿನಿಮಾ ಶೂಟಿಂಗ್ ವೇಳೆ ಅವಘಡ
Fighter Vivek Death: ರಚಿತಾ ರಾಮ್ ಸಿನಿಮಾ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು; ವಿದ್ಯುತ್ ತಂತಿ ಸ್ಪರ್ಶಿಸಿ ಅವಘಡ