1997ರಲ್ಲಿ ತೆರೆಗೆ ಬಂದ ‘ಟೈಟಾನಿಕ್’ ಚಿತ್ರಕ್ಕೆ (Titanic Movie) ಬೇರೆಯದೇ ತೂಕ ಇದೆ. ‘ಟೈಟಾನಿಕ್’ ತೆರೆಗೆ ಬಂದು 25 ವರ್ಷ ಕಳೆದರೂ ಐಕಾನಿಕ್ ಚಿತ್ರಗಳ ಸಾಲಿನಲ್ಲಿ ಇದು ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಚಿತ್ರವನ್ನು ಹತ್ತಾರು ಬಾರಿ ನೋಡಿದವರು ಅನೇಕರಿದ್ದಾರೆ. ‘ಟೈಟಾನಿಕ್’ ಮಾಡಿದ ಮೋಡಿ ಅಷ್ಟು ದೊಡ್ಡದು. ಜೇಮ್ಸ್ ಕ್ಯಾಮೆರಾನ್ (James Cameron) ನಿರ್ದೇಶನದ ಈ ಸಿನಿಮಾ ಹಲವು ಬದಲಾವಣೆಗಳೊಂದಿಗೆ ಮತ್ತೆ ರಿಲೀಸ್ ಆಗುತ್ತಿದೆ. ‘ಟೈಟಾನಿಕ್’ ರಿಲೀಸ್ ಆಗಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಮುಂದಿನ ವರ್ಷ ಪ್ರೇಮಿಗಳ ದಿನಾಚರಣೆಯಂದು (ಫೆಬ್ರವರಿ 14) ‘ಟೈಟಾನಿಕ್’ ಮತ್ತೆ ತೆರೆಗೆ ಬರುತ್ತಿದೆ.
ರೋಸ್ ಹಾಗೂ ಜ್ಯಾಕ್ ಲವ್ಸ್ಟೋರಿಯ ಮೇಲೆ ‘ಟೈಟಾನಿಕ್’ ಚಿತ್ರದ ಕಥೆ ಸಾಗುತ್ತದೆ. ಅಷ್ಟೇ ಅಲ್ಲ, ವಿಶ್ವ ಕಂಡ ಅದ್ಭುತ ಹಡಗು ಟೈಟಾನಿಕ್ ಹೇಗೆ ನಾಶವಾಯಿತು ಎಂಬುದನ್ನೂ ಈ ಸಿನಿಮಾ ಹೇಳುತ್ತದೆ. ಈಗ ‘ಟೈಟಾನಿಕ್’ ಸಿನಿಮಾದ ಸಂಗೀತ, ಹಿನ್ನೆಲೆ ಸಂಗೀತ, ಸಿನಿಮಾ ಗುಣಮಟ್ಟ ಎಲ್ಲವನ್ನೂ ಉನ್ನತ ದರ್ಜೆಗೆ ಏರಿಸಿ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ ರೀಮಾಸ್ಟರ್ಡ್ ಎನ್ನಲಾಗುತ್ತದೆ.
ಈಗ ರಿಲೀಸ್ ಆಗುತ್ತಿರುವುದು ರೀಮಾಸ್ಟರ್ಡ್ ‘ಟೈಟಾನಿಕ್’. ಈ ಚಿತ್ರ ಸಿದ್ಧಗೊಂಡಿದ್ದು 1997ರಲ್ಲಿ. ಈಗಿನ ತಂತ್ರಜ್ಞಾನಕ್ಕೆ ಹೋಲಿಸಿದರೆ 25 ವರ್ಷಗಳ ಹಿಂದೆ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ, ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಅಪ್ಗ್ರೇಡ್ ಮಾಡಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈಗ ಬಿಡುಗಡೆ ಆಗುತ್ತಿರುವ ಸಿನಿಮಾ, 3ಡಿ, 4ಕೆ ಹಾಗೂ ಎಚ್ಡಿಆರ್ ಅವತರಣಿಕೆಯಲ್ಲಿ ಇರಲಿದೆ.
‘ಟೈಟಾನಿಕ್ ರೀತಿ ಸಿನಿಮಾ ರೀ-ರಿಲೀಸ್ ಮಾಡುವ ಪ್ರಕ್ರಿಯೆ ಚಿತ್ರರಂಗದ ಪಾಲಿಗೆ ಹೊಸದಲ್ಲ. ಕನ್ನಡದ ಅನೇಕ ಸಿನಿಮಾಗಳು ಈ ಮಾದರಿಯಲ್ಲಿ ಬಿಡುಗಡೆ ಆಗಿವೆ. ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಚಿತ್ರ ರೀಮಾಸ್ಟರ್ಡ್ ಆಗಿ ರಿಲೀಸ್ ಆಗಿತ್ತು. ರಾಜ್ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರಕ್ಕೂ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಾಕಷ್ಟು ಮಂದಿ ಚಿತ್ರ ವೀಕ್ಷಿಸಿದ್ದರು. ‘ಟೈಟಾನಿಕ್’ ಚಿತ್ರಕ್ಕೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಅದಕ್ಕೂ ಹೊಸ ಟಚ್ ನೀಡಿ ಬಿಡುಗಡೆ ಮಾಡಲಾಗುತ್ತಿದೆ’ ಎಂಬುದು ಚಿತ್ರರಂಗದ ಪಂಡಿತರ ಮಾತು.
‘ಟೈಟಾನಿಕ್’ ಚಿತ್ರದಲ್ಲಿ ಲಿಯನಾರ್ಡೋ ಡಿಕ್ಯಾಪ್ರಿಯೋ ಹಾಗೂ ಕೇಟ್ ವಿನ್ಸ್ಲೆಟ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ರೀ ರಿಲೀಸ್ ಆಗುತ್ತಿರುವುದು ಇದೇ ಮೊದಲೇನಲ್ಲ. 2012ರಲ್ಲಿ ಈ ಚಿತ್ರ ಮೊದಲ ಬಾರಿ 3ಡಿಯಲ್ಲಿ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಈ ವರೆಗೆ 17,226 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರಕ್ಕೆ 11 ಆಸ್ಕರ್ ಪ್ರಶಸ್ತಿಗಳು ಸಿಕ್ಕಿವೆ ಅನ್ನೋದು ವಿಶೇಷ.
ಇದನ್ನೂ ಓದಿ: 22 ವರ್ಷಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹೇಗಿದ್ರು ನೋಡಿ; ಇಲ್ಲಿದೆ ಫೋಟೋ