ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಹಾಲಿವುಡ್ನ ಮಾಜಿ ತಾರಾ ಜೋಡಿ ಜಾನಿ ಡೆಪ್ (Johnny Depp) ಹಾಗೂ ಅಂಬರ್ ಹರ್ಡ್ (Amber Heard) ಅವರ ಪ್ರಕರಣದ ತೀರ್ಪು ಹೊರಬಿದ್ದಿದೆ. 6 ವಾರಗಳ ನಡೆದ ವಿಚಾರಣೆಯ ನಂತರ ಅಮೆರಿಕದ ವರ್ಜೀನಿಯಾ ರಾಜ್ಯದ ಫೇರ್‌ಫ್ಯಾಕ್ಸ್ ನಗರದ ಕೋರ್ಟ್‌ವೊಂದು ತೀರ್ಪು ಪ್ರಕಟಿಸಿದೆ. ಜಾನಿ ಡೆಪ್ ಅವರು ಮಾನನಷ್ಟ ಪ್ರಕರಣದಲ್ಲಿ ದೂರು ದಾಖಲಿಸಿದ್ದರು. ಸೂಕ್ತ ಸಾಕ್ಷಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಅಂಬರ್ ಹರ್ಡ್ ಅವರು ಮಾಜಿ ಪತಿ ಜಾನಿ ಡೆಪ್ ಅವರ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ತೀರ್ಪು ನೀಡಿದೆ. ಹಾಗೆಯೇ ಜಾನಿ ಡೆಪ್ ವಿರುದ್ಧ ಅಂಬರ್ ದಾಖಲಿಸಿದ್ದ ಕೆಲವು ಅಂಶಗಳನ್ನು ನ್ಯಾಯಾಲಯ ಒಪ್ಪಿಕೊಂಡಿದ್ದು, ಅವರ ಪರವಾಗಿಯೂ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಅಂಬರ್ ಹರ್ಡ್ ಅವರು ಮಾಜಿ ಪತಿ ಜಾನಿ ಡೆಪ್ ಅವರ ಮಾನಹಾನಿಗೆ ಯತ್ನಿಸಿದ ಕಾರನ ಸುಮಾರು 15 ಮಿಲಿಯನ್ ಅಮೇರಿಕನ್ ಡಾಲರ್ (ಅಂದಾಜು 116 ಕೋಟಿ ರೂ) ಮೊತ್ತದ ಪರಿಹಾರ ಪಾವತಿಸಬೇಕಿದೆ. ಹಾಗೆಯೇ ಜಾನಿ ಡೆಪ್ ಮಾಜಿ ಪತ್ನಿಗೆ ಸುಮಾರು 2 ಮಿಲಿಯನ್ ಡಾಲರ್ (15 ಕೋಟಿ ರೂ) ಪರಿಹಾರ ನೀಡಬೇಕಿದೆ.
ಏನಿದು ಪ್ರಕರಣ?
2018ರಲ್ಲಿ ಆಂಬರ್ ಹರ್ಡ್ ‘ದಿ ವಾಷಿಂಗ್ಟನ್ ಪೋಸ್ಟ್’ನಲ್ಲಿ ಕೌಟುಂಬಿಕ ಹಿಂಸೆ ವಿಚಾರದ ಬಗ್ಗೆ ಲೇಖನ ಬರೆದಿದ್ದರು. ಅದರಲ್ಲಿ ತಾವು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರನ್ನು ಪ್ರತಿನಿಧಿಸುವ ವ್ಯಕ್ತಿ ಎಂದು ಹೇಳಿಕೊಂಡಿದ್ದರು. ಲೇಖನದಲ್ಲಿ ಹೆಸರು ಪ್ರಸ್ತಾಪಿಸದಿದ್ದರೂ ಜಾನಿ ಡೆಪ್ ವಿರುದ್ಧ ಪರೋಕ್ಷವಾಗಿ ಲೇಖನ ಬರೆತಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಟ ತನ್ನ ಮಾಜಿ ಪತ್ನಿ ವಿರುದ್ಧ 50 ಮಿಲಿಯನ್ ಯುಎಸ್ ಡಾಲರ್ (ಸುಮಾರು 388 ಕೋಟಿ ರೂ) ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜಾನಿ ಡೆಪ್ ವಕೀಲರು ಆರೋಪವನ್ನು ಸುಳ್ಳು ಎಂದಿದ್ದು ತಮ್ಮ ವರ್ಷಸ್ಸಿಗೆ ಧಕ್ಕೆಯಾಗಿದೆ ಎಂದು ಪ್ರತಿಯಾಗಿ ಅಂಬರ್ ಹರ್ಡ್ 100 ಮಿಲಿಯನ್ ಡಾಲರ್ (ಸುಮಾರು 775 ಕೋಟಿ ರೂ) ಮಾನನಷ್ಟ ಕೇಸ್ ಹಾಕಿದ್ದರು.
ತೀರ್ಪನ್ನು ಸ್ವಾಗತಿಸಿರುವ ಜಾನಿ ಡೆಪ್ ‘ನ್ಯಾಯಾಧೀಶರ ತಂಡ ಮರುಹುಟ್ಟು ನೀಡಿದೆ’ ಎಂದಿದ್ದಾರೆ. ಅವರ ಅಭಿಮಾನಿಗಳು ಕೂಡ ತೀರ್ಪನ್ನು ಸ್ವಾಗತಿಸಿದ್ದಾರೆ. ಅಂಬರ್ ಹರ್ಡ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತೀರ್ಪಿನ ವಿರುದ್ಧ ನೋವು ಹೊರಹಾಕಿದ್ಧಾರೆ. ‘ಇಂದು ದೊಡ್ಡ ನಿರಾಸೆ ಆಗಿದೆ. ಇಷ್ಟೊಂದು ಸಾಕ್ಷಾಧಾರ ಇದ್ದರೂ ಮಾಜಿ ಪತಿಯ ಒ್ರಭಾವದ ವಿರುದ್ಧ ಏನೂ ಮಾಡಲಾಗಲಿಲ್ಲ. ಈ ತೀರ್ಪು ಮಹಿಳೆಯರಿಗೆ ಎಂಥ ಸಂದೇಶ ನೀಡುತ್ತದೆ ಎಂದು ನೆನೆದು ನಿರಾಸೆಯಾಗಿದೆ. ಕೌಟುಂಬಿಕ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಬೇಡವೋ ಎಂಬ ಸಂದಿಗ್ಧತೆ ಹುಟ್ಟಿಸಿದೆ’ ಎಂದು ಅವರು ಹೇಳಿದ್ದಾರೆ.
ಅಂಬರ್ ಹರ್ಡ್ ಹಾಗೂ ಜಾನಿ ಡೆಪ್ ಹಾಲಿವುಡ್ನ ಬಹುಬೇಡಿಕೆಯ ತಾರೆಯರಾಗಿದ್ದಾರೆ. ಅಂಬರ್ ಹರ್ಡ್ 36ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ನೆವರ್ ಬ್ಯಾಕ್ ಡೌನ್, ಝಾಂಬೀಲ್ಯಾಂಡ್, ಆಕ್ವಾಮ್ಯಾನ್ ಮೊದಲಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 58 ವರ್ಷದ ಜಾನಿ ಡೆಪ್ ‘ಪೈರೇಟ್ಸ್ ಆಫ್ ದಿ ಕೆರೆಬಿಯನ್’ ಸೇರಿದಂತೆ ಹಲವು ಪ್ರಖ್ಯಾತ ಸಿನಿಮಾಗಳಲ್ಲಿ ಬಣ್ಣಹಚ್ಚಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ