
ಭಾರತದಲ್ಲಿ ಹಾಲಿವುಡ್ (Hollywood) ಸಿನಿಮಾಗಳು ದೊಡ್ಡ ಮಟ್ಟದ ಲಾಭ ಮಾಡುತ್ತಿರುವುದು ಹೊಸದಲ್ಲ. ಕೋವಿಡ್ಗೆ ಮುಂಚೆಯಿಂದಲೂ ಹಾಲಿವುಡ್ನ ಕೆಲ ಸಿನಿಮಾಗಳು ನೂರಾರು ಕೋಟಿ ಬಾಕ್ಸ್ ಆಫೀಸ್ ಗಳಿಕೆಯನ್ನು ಭಾರತದಲ್ಲಿ ಮಾಡುತ್ತಿವೆ. ಹಲವು ಹಾಲಿವುಡ್ ಸಿನಿಮಾಗಳು, ಭಾರತಕ್ಕಾಗಿ ಇಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಡಬ್ ಮಾಡಿ ಸಿನಿಮಾ ಮಾಡುತ್ತವೆ. ಇತ್ತೀಚೆಗಿನ ವರ್ಷಗಳಲ್ಲಿ ಮಾರ್ವೆಲ್ನ ‘ಅವೇಂಜರ್ಸ್’ ಸಿನಿಮಾ ಸರಣಿ, ‘ಸ್ಪೈಡರ್ಮ್ಯಾನ್’, ‘ಅವತಾರ್ 2’, ‘ಆಪನ್ಹೈಮರ್’ ಸಿನಿಮಾಗಳು ಭಾರತದಲ್ಲಿ ಭಾರಿ ಪಸಲು ತೆಗೆದಿವೆ. ಇದೀಗ ಅದೇ ಸಾಲಿಗೆ ಸೇರಲು ಸಜ್ಜಾಗಿದೆ ಮತ್ತೊಂದು ಹಾಲಿವುಡ್ ಸಿನಿಮಾ.
ವಿಶ್ವದ ಅತ್ಯಂತ ದುಬಾರಿ ನಟ ಟಾಮ್ ಕ್ರೂಸ್ ನಟಿಸಿರುವ ‘ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಯ ಎಂಟನೇ ಸಿನಿಮಾ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಇನ್ನೊಂದು ವಾರದಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಮೊದಲ 24 ಗಂಟೆ ಅವಧಿಯಲ್ಲಿ 11 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ಇದು ಕಡಿಮೆ ಸಂಖ್ಯೆಯಲ್ಲ.
ಇದನ್ನೂ ಓದಿ:ಮಿಷನ್ ಇಂಪಾಸಿಬಲ್ 7 ನೋಡಿದ ನೆಟ್ಟಿಗರು ಏನಂದರು?
‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮೇ 17ಕ್ಕೆ ಭಾರತದಲ್ಲಿ ಬಿಡುಗಡೆ ಆಗಲಿದೆ. ವಿಶೇಷವೆಂದರೆ ಈ ಸಿನಿಮಾ ಇಡೀ ವಿಶ್ವದಲ್ಲಿ ಮೊದಲಿಗೆ ಭಾರತದಲ್ಲಿಯೇ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಬಿಡುಗಡೆ ಆದ ಒಂದು ವಾರದ ಬಳಿಕ ಅಮೆರಿಕ ಹಾಗೂ ಇತರೆಡೆ ಬಿಡುಗಡೆ ಆಗಲಿದೆ. ಅಲ್ಲದೆ, ‘ಮಿಷನ್ ಇಂಪಾಸಿಬಲ್’ನ ಈ ಹಿಂದಿನ ಕೆಲ ಸರಣಿಗಳು ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಟಾಮ್ ಕ್ರೂಸ್ಗೆ ಭಾರಿ ಸಂಖ್ಯೆಯ ಅಭಿಮಾನಿಗಳು ಭಾರತದಲ್ಲಿ ಇದ್ದಾರೆ. ಹಾಗಾಗಿ ಸಿನಿಮಾದ ಕಲೆಕ್ಷನ್ ಭಾರತದಲ್ಲಿ ಬಲು ಜೋರಾಗಿಯೇ ಆಗುವ ನಿರೀಕ್ಷೆ ಇದೆ.
‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ, ಇಂಗ್ಲೀಷ್, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೇ 17ರಂದೇ ತೆರೆಗೆ ಬರಲಿದೆ. ಈ ಸಿನಿಮಾದ ಮೊದಲ ಭಾಗ ‘ಮಿಷನ್ ಇಂಪಾಸಿಬಲ್: ಡೆಡ್ ರಕೂನ್’ 2023ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಒಂದು ಬೀಗದ ಹಿಂದೆ ಬಿದ್ದ ಮಾಫಿಯಾ ಗುಂಪನ್ನು ನಾಯಕ ಟಾಮ್ ಕ್ರೂಸ್ ತಡೆಯುವ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಅಂತ್ಯದಲ್ಲಿ ಆ ಬೀಗ ಟಾಮ್ ಕ್ರೂಸ್ ಕೈ ಸೇರಿತ್ತು. ಇದೀಗ ಅದೇ ಕತೆಯ ಮುಂದುವರೆದ ಭಾಗ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ