2022ನೇ ವರ್ಷದ ಆರಂಭದಲ್ಲೇ ನಟಿ ಪ್ರಿಯಾಂಕಾ ಜೋಪ್ರಾ (Priyanka Chopra) ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ಮೊದಲ ಮಗುವಿಗೆ ತಾಯಿ ಆದ ಖುಷಿಯನ್ನು ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡರು. ಆದರೆ ಅದರ ಜೊತೆ ಇದ್ದ ಒಂದು ನೋವಿನ ಸಂಗತಿಯನ್ನು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಅಭಿಮಾನಿಗಳ ಬಳಿ ಹೇಳಿಕೊಳ್ಳಲಿಲ್ಲ. ಆ ಬಗ್ಗೆ ಈಗ ಅವರು ಬಾಯಿ ಬಿಟ್ಟಿದ್ದಾರೆ. ಜೊತೆಗೆ ಇದೇ ಮೊದಲ ಬಾರಿಗೆ ಮಗುವಿನ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ನಿಕ್ ಜೋನಸ್ (Nick Jonas) ಮತ್ತು ಪ್ರಿಯಾಂಕಾ ಚೋಪ್ರಾ ದಂಪತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಮೇ 8ರಂದು ವಿಶ್ವ ಅಮ್ಮಂದಿರ ದಿನ. ಆ ಪ್ರಯುಕ್ತವೇ ಮಗುವಿನ ಫೋಟೋ (Priyanka Chopra Baby Photo) ರಿವೀಲ್ ಮಾಡಲಾಗಿದೆ. ಅದರ ಜೊತೆಗೆ ಒಂದಷ್ಟು ಶಾಕಿಂಗ್ ಸತ್ಯಗಳನ್ನೂ ಕೂಡ ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ. ಬಾಡಿಗೆ ತಾಯಿ ಮೂಲಕ ಈ ಹೆಣ್ಣು ಮಗು ಜನಿಸಿದಾಗ ಎದುರಾದ ಕಷ್ಟದ ಪರಿಸ್ಥಿತಿಯನ್ನು ಅವರು ತಿಳಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಸರೋಗೆಸಿ ಮೂಲಕ ಮೊದಲ ಮಗು ಪಡೆದವರು. ಆ ಮಗು ಅವಧಿಗೂ ಮುನ್ನ (ಆರೂವರೆ ತಿಂಗಳಿಗೆ) ಜನಿಸಿತ್ತು ಎಂಬುದು ನಂತರ ತಿಳಿದುಬಂತು. ಆ ಬಗ್ಗೆ ಇಷ್ಟು ದಿನಗಳ ಕಾಲ ಪ್ರಿಯಾಂಕಾ ಚೋಪ್ರಾ ಮೌನ ವಹಿಸಿದ್ದರು. ಆದರೆ ‘ವಿಶ್ವ ಅಮ್ಮಂದಿರ ದಿನ’ದ ಪ್ರಯುಕ್ತ ಅವರು ಎಲ್ಲವನ್ನೂ ವಿವರಿಸಿದ್ದಾರೆ. 100ಕ್ಕೂ ಹೆಚ್ಚು ದಿನಗಳ ಕಾಲ ಅವರ ಮಗು ಐಸಿಯುನಲ್ಲಿ ಇತ್ತು ಎಂಬದನ್ನು ಅವರು ತಿಳಿಸಿದ್ದಾರೆ. ಸಮಾಧಾನದ ಸಂಗತಿ ಎಂದರೆ ಈಗ ಮಗುವನ್ನು ಮನೆಗೆ ಕರೆದುಕೊಂಡು ಬರಲಾಗಿದೆ.
ಕಳೆದ ಕೆಲವು ತಿಂಗಳುಗಳ ಈ ಪಯಣ ಸವಾಲಿನಿಂದ ಕೂಡಿತ್ತು ಎಂದು ಹೇಳಿರುವ ಪ್ರಿಯಾಂಕಾ ಚೋಪ್ರಾ ಅವರು, ತಮ್ಮ ಮಗುವಿಗಾಗಿ ಶ್ರಮಿಸಿದ ಎಲ್ಲ ವೈದ್ಯರು ಮತ್ತು ನರ್ಸ್ಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಜೊತೆಗಿದ್ದು ಬೆಂಬಲ ನೀಡಿದ ಪತಿ ನಿಕ್ ಜೋನಸ್ ಅವರಿಗೂ ಪ್ರಿಯಾಂಕಾ ಥ್ಯಾಂಕ್ಸ್ ಹೇಳಿದ್ದಾರೆ. ‘ಓಂ ನಮಃ ಶಿವಾಯ’ ಎಂದು ಬರೆಯುವ ಮೂಲಕ ಅವರು ಬರಹ ಮುಗಿಸಿದ್ದಾರೆ.
ಮಗು ಹೆಸರು ತಿಳಿಸದ ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿಯ ಹೆಣ್ಣು ಮಗುವಿನ ಹೆಸರಿನ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿ ಹಬ್ಬಿತ್ತು. ಮಾಲ್ತಿ ಮೇರಿ ಚೋಪ್ರಾ ಜೋನಸ್ ಅಂತ ಹೆಸರು ಇಡಲಾಗಿದೆ ಎಂದು ಕೆಲವೆಡೆ ವರದಿ ಆಗಿತ್ತು. ಈಗ ಮಗುವಿನ ಫೋಟೋ ಬಹಿರಂಗ ಮಾಡಿರುವ ಈ ದಂಪತಿ ಎಲ್ಲಿಯೂ ಕೂಡ ಹೆಸರು ಏನೆಂದು ಪ್ರಸ್ತಾಪಿಸಿಲ್ಲ.
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ದಂಪತಿಯ ಮಗಳ ಹೆಸರು ‘ಮಾಲ್ತಿ ಮೇರಿ ಚೋಪ್ರಾ ಜೋನಸ್’ ಅಂತ ಜನನ ಪ್ರಮಾಣಪತ್ರದಲ್ಲಿ ಬರೆಯಲಾಗಿದೆ ಎಂದು TMZ ವೆಬ್ಸೈಟ್ನಲ್ಲಿ ವರದಿ ಪ್ರಕಟ ಆಗಿತ್ತು. ‘ಈ ಹೆಸರನ್ನು ಅವರು ಯಾಕೆ ಆಯ್ಕೆ ಮಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಮಾಲ್ತಿ ಎಂದರೆ ಸಂಸ್ಕೃತದಲ್ಲಿ ಪರಿಮಳ ಬೀರುವ ಹೂವು ಅಥವಾ ಬೆಳದಿಂಗಳು ಎಂಬ ಅರ್ಥ ಇದೆ. ಇದು ಭಾರತ ಹಾಗೂ ಸಂಸ್ಕೃತ ಮೂಲದ ಪದ’ ಎಂದು TMZ ವೆಬ್ಸೈಟ್ ವರದಿ ಮಾಡಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:05 am, Mon, 9 May 22