ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಅವರ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಅದ್ದೂರಿ ಸಿನಿಮಾಗಳನ್ನು ನಿರ್ದೇಶನ ಮಾಡುವುದರಲ್ಲಿ ರಾಜಮೌಳಿ ಅವರದ್ದು ಎತ್ತಿದ ಕೈ. ಅವರ ಸಿನಿಮಾ ಗ್ರಾಫಿಕ್ಸ್ ಅತ್ಯುತ್ತಮವಾಗಿರುತ್ತದೆ. ಇವರ ಸಿನಿಮಾ ಮೇಕಿಂಗ್ ಅನ್ನು ಅನೇಕರು ಹಾಲಿವುಡ್ ಚಿತ್ರಗಳಿಗೆ (Hollywood Movies) ಹೋಲಿಕೆ ಮಾಡಿದ್ದೂ ಇದೆ. ಈಗ ಹಾಲಿವುಡ್‌ನಲ್ಲಿ ಸಿನಿಮಾ ಮಾಡುವ ಆಸೆಯನ್ನು ರಾಜಮೌಳಿ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ರಾಜಮೌಳಿ ಕಿಂಗ್. ಆದರೆ, ಹಾಲಿವುಡ್‌ನಲ್ಲಿ ಈ ರೀತಿ ಆಗುವುದಿಲ್ಲ ಎನ್ನುವ ಭಯ ಅವರಲ್ಲಿ ಇದೆ.
‘ಆರ್ಆರ್ಆರ್’ ಸಿನಿಮಾ ಅಮೆರಿಕದಲ್ಲಿ 3 ಪ್ರಶಸ್ತಿಗಳನ್ನು ಗೆದ್ದಿದೆ. ‘ಗೋಲ್ಡನ್ ಗ್ಲೋಬ್ಸ್’ನಲ್ಲಿ ಒಂದು ಹಾಗೂ ‘ಕ್ರಿಟಿಕ್ಸ್ ಅವಾರ್ಡ್’ನಲ್ಲಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಈ ಖುಷಿಯನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಹಾಲಿವುಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಹಾಲಿವುಡ್‌ನಲ್ಲಿ ಸಿನಿಮಾ ಮಾಡಬೇಕು ಎಂಬುದು ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ನಿರ್ದೇಶಕನ ಕನಸಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ. ನಾನು ಅದಕ್ಕೆ ಹೊರತಾಗಿಲ್ಲ. ನಾನು ಪ್ರಯೋಗಗಳನ್ನು ಮಾಡಲು ಸಿದ್ಧನಿದ್ದೇನೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ನನಗೆ ಗೊಂದಲವಿದೆ’ ಎಂದು ಅವರು ಹೇಳಿದ್ದಾರೆ.
‘ಭಾರತದಲ್ಲಿ ನಾನು ಸಿನಿಮಾ ಮಾಡಿದರೆ ನಾನು ಡಿಕ್ಟೇಟರ್. ಸಿನಿಮಾ ಹೇಗೆ ಮಾಡಬೇಕು ಎಂದು ಯಾರೂ ನನಗೆ ಹೇಳಬೇಕಿಲ್ಲ. ಆದರೆ, ಹಾಲಿವುಡ್‌ನಲ್ಲಿ ಸಿನಿಮಾ ಮಾಡಿದರೆ ಮತ್ತೊಬ್ಬರಿಗೆ ಕ್ರೆಡಿಟ್ ಕೊಡಲೇಬೇಕು. ಏಕೆಂದರೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡಿದರೆ ನಾನು ಮತ್ತೊಬ್ಬರ ಜತೆ ಕೈ ಜೋಡಿಸಲೇಬೇಕಾಗುತ್ತದೆ’ ಎಂದಿದ್ದಾರೆ ರಾಜಮೌಳಿ.
ಇದನ್ನೂ ಓದಿ: SS Rajamouli: ‘RRR ಬಾಲಿವುಡ್ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ
ರಾಜಮೌಳಿ ಅವರ ‘ಆರ್ಆರ್ಆರ್’ ಚಿತ್ರ ಹಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ‘ಆರ್ಆರ್ಆರ್ ಚಿತ್ರವನ್ನು ವಿದೇಶಿಗರು ಹೊಗಳುತ್ತಿದ್ದಾರೆ. ಈ ಚಿತ್ರವನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ. ಇತ್ತೀಚೆಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇಡೀ ತಂಡ ಭಾಗಿ ಆಗಿತ್ತು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ‘ಆರ್ಆರ್ಆರ್’ ಆಸ್ಕರ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ