SS Rajamouli: ‘RRR ಬಾಲಿವುಡ್ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ
RRR Movie | Tollywood: ರಾಜಮೌಳಿ ಅವರ ಈ ಹೇಳಿಕೆಗೆ ಕೆಲವರು ತಕರಾರು ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ‘ಬಾಹುಬಲಿ’, ‘ಆರ್ಆರ್ಆರ್’ (RRR Movie) ಮುಂತಾದ ಸಿನಿಮಾಗಳಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ‘ಗೋಲ್ಡನ್ ಗ್ಲೋಬ್ 2023’ ಅವಾರ್ಡ್ ಪಡೆದುಕೊಂಡ ನಂತರ ಬೇರೆ ಬೇರೆ ದೇಶಗಳ ಜನರು ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಈಗ ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಪ್ರಶಸ್ತಿ (Oscar Award) ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ರಾಜಮೌಳಿ ನೀಡಿದ ಒಂದು ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ‘ಆರ್ಆರ್ಆರ್ ಬಾಲಿವುಡ್ ಸಿನಿಮಾ’ ಅಲ್ಲ ಎಂದು ರಾಜಮೌಳಿ (SS Rajamouli) ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಹಿಂದಿ ಪ್ರೇಕ್ಷಕರ ಪೈಕಿ ಕೆಲವರು ಅಸಮಾಧಾನಗೊಂಡಿದ್ದಾರೆ.
ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ‘ಆರ್ಆರ್ಆರ್’ ಚಿತ್ರವನ್ನು ನಾಮಿನೇಟ್ ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ‘ಫಾರ್ ಯುವರ್ ಕನ್ಸಿಡರೇಷನ್’ ಕ್ಯಾಂಪೇನ್ ಮೂಲಕ ಈ ಚಿತ್ರವನ್ನು ಆಸ್ಕರ್ಗೆ ಕಳಿಸುವ ಕಸರತ್ತು ನಡೆಯುತ್ತಿವೆ. ಅದರ ಅಂಗವಾಗಿ ಇತ್ತೀಚೆಗೆ ಅಮೆರಿಕದಲ್ಲಿ ಈ ಸಿನಿಮಾದ ಪ್ರದರ್ಶನ ಮತ್ತು ಸಂವಾದ ನಡೆಯಿತು. ಸಿನಿಮಾ ಬಿತ್ತರ ಆಗುವುದಕ್ಕೂ ಮುನ್ನ ರಾಜಮೌಳಿ ಮಾತನಾಡಿದರು. ‘ಇದು ಬಾಲಿವುಡ್ ಸಿನಿಮಾ ಅಲ್ಲ. ದಕ್ಷಿಣ ಭಾರತದ ತೆಲುಗು ಭಾಷೆಯ ಸಿನಿಮಾ ಇದು. ಅಲ್ಲಿಂದಲೇ ನಾನು ಬಂದಿರುವುದು. ಸಿನಿಮಾದ ಕಥೆಯನ್ನು ಮುಂದುವರಿಸಲು ನಾನು ಹಾಡುಗಳನ್ನು ಬಳಸುತ್ತೇನೆ’ ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ: Natu Natu Song: ಯುದ್ಧ ಶುರು ಆಗೋದಕ್ಕೂ ಮುನ್ನ ಉಕ್ರೇನ್ನಲ್ಲಿ ‘ನಾಟು ನಾಟು..’ ಸಾಂಗ್ ಶೂಟಿಂಗ್ ಮಾಡಿದ್ದ ರಾಜಮೌಳಿ
ರಾಜಮೌಳಿ ಅವರ ಈ ಹೇಳಿಕೆಗೆ ಕೆಲವರು ತಕಾರಾರು ತೆಗೆದಿದ್ದಾರೆ. ‘ಆರ್ಆರ್ಆರ್ ನಾಮಿನೇಟ್ ಆಗುವುದು ಭಾರತದಿಂದಲೇ ಹೊರತು ಸೌತ್ ಇಂಡಿಯಾ ಅಥವಾ ತೆಲುಗು ಚಿತ್ರರಂಗದಿಂದ ಅಲ್ಲ. ಪ್ರದೇಶ ಮತ್ತು ಭಾಷೆಗಳ ವಿಚಾರದಲ್ಲಿ ಪಕ್ಷಪಾತ ಬೇಡ. ಬಾಲಿವುಡ್ ಎಂದರೆ ಒಂದು ಚಿತ್ರರಂಗವಲ್ಲ. ಅದು ಭಾರತವನ್ನು ಪ್ರತಿನಿಧಿಸುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಆದರೆ ಈ ಮಾತಿನಲ್ಲಿ ತರ್ಕವೇ ಇಲ್ಲ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rajamouli: ರಾಜಮೌಳಿಯ ಹಾಲಿವುಡ್ ಪ್ಲ್ಯಾನ್ ಏನು? ಕೇಳಿಬಂತು ಎರಡು ಅಚ್ಚರಿಯ ಸುದ್ದಿ
‘ಭಾರತದಿಂದ ಬಂದ ಎಲ್ಲ ಸಿನಿಮಾಗಳನ್ನೂ ಬಾಲಿವುಡ್ ಚಿತ್ರಗಳು ಎಂದು ಯಾಕೆ ಹಣೆಪಟ್ಟಿ ಕಟ್ಟಬೇಕು’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ‘ಬಾಲಿವುಡ್ನಲ್ಲಿ ಉತ್ತಮ ಸಿನಿಮಾಗಳು ಬರುತ್ತವೆ ಎಂಬುದು ನಿಜ. ಅದೇ ರೀತಿ ಸೌತ್ ಇಂಡಿಯಾದಿಂದ ಒಳ್ಳೆಯ ಸಿನಿಮಾಗಳು ಬಂದಾಗ ಅವರಿಗೂ ಕ್ರೆಡಿಟ್ ಸಿಗಬೇಕು’ ಎಂದು ಹಲವರು ಹೇಳಿದ್ದಾರೆ. ಆ ಮೂಲಕ ರಾಜಮೌಳಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಪರ-ವಿರೋಧ ಏನೇ ಇರಲಿ, ಭಾರತದ ಸಿನಿಮಾಗೆ ಆಸ್ಕರ್ ಸಿಗಲಿ ಎಂದು ಸಿನಿಪ್ರಿಯರು ಬಯಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.