Natu Natu Song: ಯುದ್ಧ ಶುರು ಆಗೋದಕ್ಕೂ ಮುನ್ನ ಉಕ್ರೇನ್ನಲ್ಲಿ ‘ನಾಟು ನಾಟು..’ ಸಾಂಗ್ ಶೂಟಿಂಗ್ ಮಾಡಿದ್ದ ರಾಜಮೌಳಿ
Natu Natu | Golden Globe Awards: ಉಕ್ರೇನ್ನಲ್ಲಿ ಶೂಟಿಂಗ್ ಮಾಡಿದ ಘಟನೆಯನ್ನು ರಾಮ್ ಚರಣ್ ಪತ್ನಿ ಉಪಾಸನಾ ಅವರು ನೆನಪಿಸಿಕೊಂಡಿದ್ದಾರೆ. ಈಗ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಖುಷಿಯಲ್ಲಿ ಇಡೀ ತಂಡ ತೇಲುತ್ತಿದೆ.
ಭಾರತೀಯ ಚಿತ್ರರಂಗಕ್ಕೆ ‘ಆರ್ಆರ್ಆರ್’ ಸಿನಿಮಾದಿಂದ ಹೆಮ್ಮೆ ಮೂಡುವಂತಾಗಿದೆ. ಈ ಸಿನಿಮಾದ ‘ನಾಟು ನಾಟು..’ (Natu Natu Song) ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ (Golden Globe Awards) ಸಿಕ್ಕಿದೆ. ಲಾಸ್ ಏಂಜಲಿಸ್ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ಇಡೀ ತಂಡ ಸಾಥ್ ನೀಡಿದೆ. ನಿರ್ದೇಶಕ ಎಸ್ಎಸ್ ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಪತ್ನಿ ಉಪಾಸನಾ ಸೇರಿದಂತೆ ಅನೇಕರು ಈ ಸಂಭ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಈಗ ಎಲ್ಲರೂ ‘ನಾಟು ನಾಟು..’ ಹಾಡಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಹಾಡಿನ ಶೂಟಿಂಗ್ ಆಗಿದ್ದು ಉಕ್ರೇನ್ನಲ್ಲಿ. ರಷ್ಯಾ-ಉಕ್ರೇನ್ (Ukraine) ಯುದ್ಧ ಶುರು ಆಗುವುದಕ್ಕೂ ಮುನ್ನ ‘ಆರ್ಆರ್ಆರ್’ ಚಿತ್ರತಂಡ ಅಲ್ಲಿ ಹಾಡಿನ ಚಿತ್ರೀಕರಣ ಮಾಡಿತ್ತು.
ಉಕ್ರೇನ್-ರಷ್ಯಾ ಯುದ್ಧ ಶುರುವಾದ ನಂತರ ಅಲ್ಲಿನ ವಾತಾವರಣ ತುಂಬ ಭೀಕರವಾಯಿತು. ಜನರು ಪ್ರಾಣ ಉಳಿಸಿಕೊಳ್ಳಲು ಸಖತ್ ಕಷ್ಟಪಟ್ಟರು. ಉಕ್ರೇನ್ನ ಬೃಹತ್ ಕಟ್ಟಡಗಳ ಮೇಲೆ ಬಾಂಬ್ ದಾಳಿ ಮಾಡಲಾಯಿತು. ನಗರಗಳು ನೆಲಸಮವಾದವು. ಅಂಥ ಪರಿಸ್ಥಿತಿ ನಿರ್ಮಾಣ ಆಗುವುದಕ್ಕೂ ಮುನ್ನ ‘ಆರ್ಆರ್ಆರ್’ ಚಿತ್ರತಂಡ ಅಲ್ಲಿ ಶೂಟಿಂಗ್ ಮಾಡಿತ್ತು. ಉಕ್ರೇನ್ನಲ್ಲಿ ಶೂಟಿಂಗ್ ಮಾಡಿದ ಘಟನೆಯನ್ನು ರಾಮ್ ಚರಣ್ ಪತ್ನಿ ಉಪಾಸನಾ ಅವರು ನೆನಪಿಸಿಕೊಂಡಿದ್ದಾರೆ. ಈಗ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಖುಷಿಯಲ್ಲಿ ಇಡೀ ತಂಡ ತೇಲುತ್ತಿದೆ. ಎಂಎಂ ಕೀರವಾಣಿ ಹಾಗೂ ‘ಆರ್ಆರ್ಆರ್’ ಟೀಮ್ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್ ಗ್ಲೋಬ್ ವಿನ್ನರ್ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
‘ಆರ್ಆರ್ಆರ್’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ:
‘ಇದೊಂದು ವಿಶೇಷವಾದ ಸಾಧನೆ. ಎಂಎಂ ಕೀರವಾಣಿ, ಪ್ರೇಮ್ ರಕ್ಷಿತ್, ಕಾಲ ಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗಂಜ್, ಎಸ್ಎಸ್ ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮತ್ತು ಇಡೀ ಆರ್ಆರ್ಆರ್ ಸಿನಿಮಾ ತಂಡಕ್ಕೆ ಅಭಿನಂದನೆಗಳು. ಈ ಪ್ರತಿಷ್ಠಿತ ಪ್ರಶಸ್ತಿಯಿಂದಾಗಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಭಾವ ಮೂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Golden Globes 2023: ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ ‘ಆರ್ಆರ್ಆರ್’ ತಂಡ; ಇಲ್ಲಿದೆ ಫೋಟೋ ಗ್ಯಾಲರಿ
ಆಸ್ಕರ್ ಪ್ರಶಸ್ತಿ ಮೇಲೆ ‘ಆರ್ಆರ್ಆರ್’ ಕಣ್ಣು:
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪಡೆಯಬೇಕು ಎಂದು ‘ಆರ್ಆರ್ಆರ್’ ಚಿತ್ರತಂಡ ಪ್ರಯತ್ನಿಸುತ್ತಿದೆ. ‘ಫಾರ್ ಯುವರ್ ಕನ್ಸಿಡರೇಷನ್’ ಕ್ಯಾಂಪೇನ್ ಮೂಲಕ ನಾಮನಿರ್ದೇಶನಗೊಳ್ಳಲು ಪ್ರಯತ್ನಗಳು ನಡೆದಿವೆ. ಅಂತಿಮವಾಗಿ ಏನಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.