Ragini Dwivedi: ಬಾಲಿವುಡ್ ಹಾರರ್ ಚಿತ್ರಕ್ಕೆ ಲಂಡನ್ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿ ಬಂದ ರಾಗಿಣಿ ದ್ವಿವೇದಿ
Ragini Dwivedi | Bollywood News: ಕನ್ನಡ ಮತ್ತು ಹಿಂದಿ ಚಿತ್ರಗಳಿಗಷ್ಟೇ ರಾಗಿಣಿ ಸೀಮಿತವಾಗಿಲ್ಲ. ಬೇರೆ ಭಾಷೆಯ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಆ ಬಗ್ಗೆ ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕಳೆದ 13 ವರ್ಷದಿಂದ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸಕ್ರಿಯರಾಗಿದ್ದಾರೆ. ಈಗ ಅವರು ಬಾಲಿವುಡ್ ಕದ ತಟ್ಟಿದ್ದಾರೆ. ಹಿಂದಿ ಸಿನಿಮಾವೊಂದರಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಆ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಲಂಡನ್ನಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡು ಬಂದಿರುವ ರಾಗಿಣಿ ಅವರು, ಆ ಖುಷಿಯನ್ನು ಹಂಚಿಕೊಳ್ಳಲು ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದರು. ತಮ್ಮ ಮೊದಲ ಬಾಲಿವುಡ್ (Bollywood) ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ? ನಿರ್ದೇಶಕರು ಯಾರು? ವಿದೇಶದಲ್ಲಿ ಚಿತ್ರೀಕರಣ ಆಗುತ್ತಿರುವುದು ಯಾಕೆ? ಈವರೆಗಿನ ಕನ್ನಡ ಚಿತ್ರರಂಗದ ಪಯಣ ಹೇಗಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ರಾಗಿಣಿ ದ್ವಿವೇದಿ ಉತ್ತರ ನೀಡಿದ್ದಾರೆ.
‘ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನನ್ನ ಪಯಣ ಚೆನ್ನಾಗಿತ್ತು. 2022ರಲ್ಲಿ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದೆ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್-ಥ್ರಿಲ್ಲರ್ ಸಿನಿಮಾ. ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು ‘ವಾಕ್ರೋ ಹೌಸ್’. ಸಂಪೂರ್ಣ ಶೂಟಿಂಗ್ ಮುಗಿದ ಮೇಲೆ ತಂಡದೊಂದಿಗೆ ಮತ್ತೆ ಬರುತ್ತೇನೆ’ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.
‘ನಾನು ಇದರಲ್ಲಿ ಲಂಡನ್ ಮೂಲದ ಬುಕ್ ರೈಟರ್ ಪಾತ್ರ ಮಾಡುತ್ತಿದ್ದೇನೆ. ಹಾಗಾಗಿ ಮೊದಲ ಹಂತದ ಶೂಟಿಂಗ್ ಲಂಡನ್ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಒಳ್ಳೆಯ ಕಲಾವಿದರು ಇದ್ದಾರೆ. ನನ್ನ ಮೊದಲ ಹಿಂದಿ ಸಿನಿಮಾದಲ್ಲಿ ಹಾರರ್ ಸಬ್ಜೆಕ್ಟ್ ಇದೆ. ಒಳ್ಳೆಯ ಕಥೆ, ಪಾತ್ರ ಇದಿದ್ದರಿಂದ ಖುಷಿಯಾಗಿದ್ದೇನೆ. ಹಿಂದಿ ಸಿನಿಮಾ ಮಾಡ್ತಾ ಇರೋದು ತಂದೆ-ತಾಯಿಗೆ ಖುಷಿ ನೀಡಿದೆ. ಅವರ ಬೆಂಬಲದಿಂದಲೇ ನಾನು ಇಷ್ಟು ಬೆಳೆಯಲು ಸಾಧ್ಯವಾಯ್ತು’ ಎಂದಿದ್ದಾರೆ ರಾಗಿಣಿ.
ಇದನ್ನೂ ಓದಿ: Ragini Dwivedi: ಕ್ಯೂಟ್ ಆಗಿ ಪೋಸ್ ನೀಡಿದ ನಟಿ ರಾಗಿಣಿ ದ್ವಿವೇದಿ; ಇಲ್ಲಿದೆ ಗ್ಯಾಲರಿ
ಕನ್ನಡ ಮತ್ತು ಹಿಂದಿ ಚಿತ್ರಗಳಿಗಷ್ಟೇ ರಾಗಿಣಿ ಸೀಮಿತವಾಗಿಲ್ಲ. ಬೇರೆ ಭಾಷೆಯ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಆ ಬಗ್ಗೆ ಕೂಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಬಾಲಿವುಡ್ ಸಿನಿಮಾ ಜೊತೆಗೆ ಮಲಯಾಳಂನಲ್ಲಿ ಒಂದು, ತಮಿಳಿನಲ್ಲಿ ಮೂರು ಹಾಗೂ ತೆಲುಗಿನಲ್ಲಿ ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ 2 ಸಿನಿಮಾ ಮಾಡುತ್ತಾ ಇದ್ದೇನೆ. ಇಂದು ಎಲ್ಲಾ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಅವಕಾಶಗಳು ಬರುತ್ತಿವೆ. ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಒಟಿಟಿ ಬಂದಿದ್ದರಿಂದ ನಮ್ಮಂತಹ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ’ ಎಂದು ರಾಗಿಣಿ ಹೇಳಿದ್ದಾರೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ!
ಕನ್ನಡ ಚಿತ್ರರಂಗದ ಬಗ್ಗೆ ರಾಗಿಣಿ ಹೆಮ್ಮೆ:
‘ಕನ್ನಡದ ವಿಕ್ರಾಂತ್ ರೋಣ, ಕಾಂತಾರ ಸಿನಿಮಾಗಳು ಆಸ್ಕರ್ ರೇಸ್ಗೆ ಹೋಗಿರೋದು ಖುಷಿ ನೀಡಿದೆ. ಕಾಂತರ ಚಿತ್ರದಿಂದ ಕನ್ನಡ ಚಿತ್ರರಂಗ ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ. ಇದು ನಮ್ಮ ಹೆಮ್ಮೆ. ತುಂಬಾ ಕಡೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ವರ್ಷ ಮಾರ್ಚ್ ತಿಂಗಳಿಂದ ನನ್ನ ಸಿನಿಮಾಗಳು ಎಲ್ಲಾ ಭಾಷೆಯಿಂದ ಒಂದೊಂದಾಗಿ ರಿಲೀಸ್ ಆಗಬಹುದು’ ಎಂದು ರಾಗಿಣಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.