‘ದಿ ಗಾಡ್ಫಾದರ್’ (The Godfather) ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಜೇಮ್ಸ್ ಕಾನ್ (James Caan) ಅವರು ನಿಧನರಾಗಿದ್ದಾರೆ. ಬುಧವಾರ (ಜುಲೈ 6) ಸಂಜೆ ಅವರು ಕೊನೆಯುಸಿರು ಎಳೆದರು ಎಂದು ಕುಟುಂಬದವರೇ ತಿಳಿಸಿದ್ದಾರೆ. ಟ್ವಿಟರ್ ಮೂಲಕ ಈ ಸುದ್ದಿಯನ್ನು ಖಚಿತಪಡಿಸಲಾಗಿದೆ. ಬರೋಬ್ಬರಿ ಆರು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಜೇಮ್ಸ್ ಕಾನ್ ಸಕ್ರಿಯರಾಗಿದ್ದರು. ಅಮೆರಿಕದ ಈ ನಟನಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಹಲವಾರು ಗಮನಾರ್ಹ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು ಈಗ ನೆನಪು ಪಾತ್ರ. ಜೇಮ್ಸ್ ಕಾನ್ ನಿಧನಕ್ಕೆ (James Caan Death) ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಜೇಮ್ಸ್ ಕಾನ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ‘ಜಿಮ್ಮಿ ಅವರು ಬುಧವಾರ ಸಂಜೆ ಮೃತರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಹರಿದುಬರುತ್ತಿರುವ ಪ್ರೀತಿ ಮತ್ತು ಸಂತಾಪಕ್ಕೆ ಕುಟುಂಬದಿಂದ ಧನ್ಯವಾದಗಳು. ಈ ಕಷ್ಟದ ಸಂದರ್ಭದಲ್ಲಿ ಕುಟುಂಬದ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿ’ ಎಂದು ಟ್ವೀಟ್ ಮಾಡಲಾಗಿದೆ.
It is with great sadness that we inform you of the passing of Jimmy on the evening of July 6.
The family appreciates the outpouring of love and heartfelt condolences and asks that you continue to respect their privacy during this difficult time.
End of tweet
— James Caan (@James_Caan) July 7, 2022
ಜೇಮ್ಸ್ ಕಾನ್ ಜನಿಸಿದ್ದು 1940ರಲ್ಲಿ. ಬಾಲ್ಯದಲ್ಲಿಯೇ ಅವರಿಗೆ ನಟನೆ ಬಗ್ಗೆ ಆಸಕ್ತಿ ಇತ್ತು. ನಂತರದ ದಿನಗಳಲ್ಲಿ ಅವರು ರಂಗಭೂಮಿಯಲ್ಲಿ ತೊಡಗಿಕೊಂಡರು. ಬಳಿಕ ಟಿವಿ ಶೋಗಳು ಹಾಗೂ ಸಿನಿಮಾಗಳಲ್ಲೂ ಅವರಿಗೆ ಅವಕಾಶ ಸಿಗಲು ಆರಂಭ ಆಯಿತು. 1960ರ ಸಮಯದಲ್ಲಿ ಅವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಶುರುಮಾಡಿದರು. 1965ರಲ್ಲಿ ‘ಎಲ್ ಡೊರಾಡೊ’ ಸಿನಿಮಾ ಮೂಲಕ ಅವರು ಮೊದಲ ಬಾರಿಗೆ ಹೀರೋ ಆದರು. ಹಾಗಿದ್ದರೂ ಕೂಡ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ದಿ ಗಾಡ್ಫಾದರ್’ ಚಿತ್ರದ ಮೂಲಕ.
ಇದನ್ನೂ ಓದಿ: Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್ಟಿಆರ್ ಅಭಿಮಾನಿ ನಿಧನ; ಸ್ಟಾರ್ ನಟನ ಪ್ರಾರ್ಥನೆಯೂ ಫಲಿಸಲಿಲ್ಲ
1972ರಲ್ಲಿ ‘ದಿ ಗಾಡ್ ಫಾದರ್’ ಸಿನಿಮಾ ತೆರೆಕಂಡಿತು. ಆ ಚಿತ್ರದಲ್ಲಿ ಜೇಮ್ಸ್ ಕಾನ್ ಮಾಡಿದ ಸನ್ನಿ ಕಾರ್ಲಿಯೋನ್ ಎಂಬ ಪಾತ್ರ ಸಖತ್ ಜನಪ್ರಿಯವಾಯಿತು. ಆ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡರು. ಆ ಪಾತ್ರದಲ್ಲಿನ ಅಭಿನಯಕ್ಕಾಗಿ ಅವರು ಆಸ್ಕರ್ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು.
ತೀರಾ ಇತ್ತೀಚಿನ ವರ್ಷಗಳವರೆಗೂ ಜೇಮ್ಸ್ ಕಾನ್ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಸಿನಿಮಾ ಮಾತ್ರವಲ್ಲದೇ ಹಲವಾರು ಟಿವಿ ಶೋಗಳಲ್ಲಿ ಅವರು ನಟಿಸಿದ್ದರು. ಹಲವಾರು ಸ್ಮರಣೀಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಶಾಶ್ವತವಾಗಿ ಇರಲಿದ್ದಾರೆ.
Published On - 7:36 am, Fri, 8 July 22