22 ನಿಮಿಷ ಜಾಹೀರಾತು ಪ್ರದರ್ಶನ ಮಾಡಿದ ಚಿತ್ರಮಂದಿರಕ್ಕೆ ಬಿತ್ತು 75 ಸಾವಿರ ರೂ. ದಂಡ

ಸಿನಿಮಾ ಆರಂಭಕ್ಕೂ ಮುನ್ನ 22 ನಿಮಿಷಗಳ ಕಾಲ ಜಾಹೀರಾತು ಪ್ರದರ್ಶಿಸಿದ ಹೈದರಾಬಾದ್‌ನ ಚಿತ್ರಮಂದಿರಕ್ಕೆ ಗ್ರಾಹಕ ನ್ಯಾಯಾಲಯವು 75,000 ರೂಪಾಯಿ ದಂಡ ವಿಧಿಸಿದೆ. ನಿಗದಿತ ಸಮಯಕ್ಕೆ ಸಿನಿಮಾ ಪ್ರಸಾರ ಮಾಡದೇ ಪ್ರೇಕ್ಷಕನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ನ್ಯಾಯಾಲಯ ಈ ಕಠಿಣ ಕ್ರಮ ಕೈಗೊಂಡಿದೆ. ಈ ತೀರ್ಪು ಪ್ರೇಕ್ಷಕರ ವಲಯದಲ್ಲಿ ಈಗ ತೀವ್ರ ಸಂಚಲನ ಮೂಡಿಸಿದೆ.

22 ನಿಮಿಷ ಜಾಹೀರಾತು ಪ್ರದರ್ಶನ ಮಾಡಿದ ಚಿತ್ರಮಂದಿರಕ್ಕೆ ಬಿತ್ತು 75 ಸಾವಿರ ರೂ. ದಂಡ
ಥಿಯೇಟರ್ (ಸಾಂದರ್ಭಿಕ ಚಿತ್ರ)
Image Credit source: telangana today
Edited By:

Updated on: Sep 29, 2026 | 7:52 AM

ಮುಖ್ಯಾಂಶಗಳು

  • ಚಿತ್ರಮಂದಿರಕ್ಕೆ ಶಾಕ್ ನೀಡಿದ ಗ್ರಾಹಕ ನ್ಯಾಯಾಲಯ
  • 22 ನಿಮಿಷ ಜಾಹೀರಾತು ಪ್ರಸಾರ
  • ಸಂತ್ರಸ್ತನಿಗೆ 25 ಸಾವಿರ ಪರಿಹಾರ

ಸಿನಿಮಾ ಪ್ರಾರಂಭವಾಗುವ ಮೊದಲು ಜಾಹೀರಾತುಗಳನ್ನು ಪ್ರದರ್ಶಿಸುವುದು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿದೆ. ಆದರೆ ಹೈದರಾಬಾದ್‌ನ ಚಿತ್ರಮಂದಿರವೊಂದು ಪ್ರೇಕ್ಷಕರಿಗೆ ಬರೋಬ್ಬರಿ 22 ನಿಮಿಷಗಳ ಕಾಲ ಜಾಹೀರಾತು ತೋರಿಸಿದೆ. ಇದರಿಂದ ಕೆರಳಿದ ಪ್ರೇಕ್ಷಕನೊಬ್ಬ ನೇರವಾಗಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದಾನೆ. ನ್ಯಾಯಾಲಯವು ಈಗ ಸಂಬಂಧಪಟ್ಟ ಚಿತ್ರಮಂದಿರಕ್ಕೆ ಬಾರೀ ದಂಡ ವಿಧಿಸಿ ಆದೇಶ ಹೊರಡಿಸಿದೆ. ಪ್ರೇಕ್ಷಕರ ಸಮಯ ವ್ಯರ್ಥ ಮಾಡಿದ್ದಕ್ಕೆ ಈಗ ತಕ್ಕ ಶಾಸ್ತಿಯಾಗಿದೆ.

ಈ ಘಟನೆ ನಡೆದದ್ದು ಸೆಪ್ಟೆಂಬರ್ 2025 ರಲ್ಲಿ. ಹೈದರಾಬಾದ್‌ನ ಚಿತ್ರಮಂದಿರವೊಂದರಲ್ಲಿ ‘ಕುಬೇರ’ ಸಿನಿಮಾ ವೀಕ್ಷಿಸಲು ವ್ಯಕ್ತಿಯೊಬ್ಬರು ತೆರಳಿದ್ದರು. ರಾತ್ರಿ 10:35 ಕ್ಕೆ ಪ್ರದರ್ಶನ ಪ್ರಾರಂಭವಾಗಬೇಕಿತ್ತು. ಆದರೆ ಚಿತ್ರಮಂದಿರದವರು ಸಾಲು ಸಾಲು ಜಾಹೀರಾತುಗಳನ್ನು ಪ್ರಸಾರ ಮಾಡಲು ಶುರು ಮಾಡಿದ್ದರು.

ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಬ್ರ್ಯಾಂಡ್ ಪ್ರಚಾರಗಳನ್ನು ಪ್ರದರ್ಶಿಸಲಾಯಿತು. ಇದರಿಂದ ಸಿನಿಮಾ ಪ್ರದರ್ಶನ ತಡವಾಗಿ ಆರಂಭವಾಯಿತು. ನಿಗದಿತ ಸಮಯಕ್ಕೆ ಸಿನಿಮಾ ಆರಂಭವಾಗದೇ ಇದ್ದದ್ದನ್ನು ಕಂಡು ಆ ಗ್ರಾಹಕ ತೀವ್ರ ಅಸಮಾಧಾನಗೊಂಡರು. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ದೂರನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯವು ಚಿತ್ರಮಂದಿರದ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಸಂತ್ರಸ್ತ ಪ್ರೇಕ್ಷಕನಿಗೆ 25,000 ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ. ಇದರ ಜೊತೆಗೆ ಜಿಲ್ಲಾ ಗ್ರಾಹಕ ಪೀಠಕ್ಕೆ 50,000 ರೂಪಾಯಿ ಪಾವತಿಸಲು ಆದೇಶಿಸಿದೆ. ಹೀಗಾಗಿ ಚಿತ್ರಮಂದಿರವು ಒಟ್ಟು 75,000 ರೂಪಾಯಿ ದಂಡ ತೆರಬೇಕಾಗಿದೆ.

ಇದನ್ನೂ ಓದಿ: ಚಿತ್ರಮಂದಿರದಲ್ಲಿ ಮುಖಾಮುಖಿಯಾಗಲಿದ್ದಾರೆ ವಿಜಯ್ ಹಾಗೂ ಮಗ ಜೇಸನ್

ಈ ತೀರ್ಪು ಹೊರಬಿದ್ದ ನಂತರ ಜಾಹೀರಾತುಗಳ ಪ್ರದರ್ಶನದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಹಣ ನೀಡಿ ಟಿಕೆಟ್ ಖರೀದಿಸುವ ಪ್ರೇಕ್ಷಕರಿಗೆ ಕಾಯುವುದು ದೊಡ್ಡ ಕಿರಿಕಿರಿ ಉಂಟುಮಾಡುತ್ತದೆ. ಚಿತ್ರಮಂದಿರಗಳು ಸಮಯಕ್ಕೆ ಸರಿಯಾಗಿ ಸಿನಿಮಾ ಪ್ರದರ್ಶಿಸಬೇಕು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ. ಈ ಘಟನೆಯು ಚಿತ್ರಮಂದಿರಗಳ ಮಾಲೀಕರಿಗೆ ಸೂಕ್ತ ಎಚ್ಚರಿಕೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us