
ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 1,500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿ, 8,000ಕ್ಕೂ ಅಧಿಕ ಹಾಡುಗಳನ್ನು ರಚಿಸಿದವರು ಇಳಯರಾಜಾ. ಬ್ರಿಟನ್‌ನ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದಿಂದ ‘ಮಾಸ್ಟ್ರೋ’ ಬಿರುದು ಪಡೆದ ಮೊದಲ ಏಷ್ಯನ್ ಇವರಾಗಿದ್ದಾರೆ. ಆದರೆ, ಇವರ ಸಂಗೀತ ಜಗತ್ತಿನಾದ್ಯಂತ ವಾಣಿಜ್ಯಿಕವಾಗಿ ಕೋಟಿ ಕೋಟಿ ಗಳಿಸಿದರೂ, ಅದರ ಲಾಭವೆಲ್ಲಾ ನಿರ್ಮಾಪಕರು ಹಾಗೂ ಆಡಿಯೋ ಕಂಪನಿಗಳ ಪಾಲಾಯಿತೇ ಹೊರತು ಇಳಯರಾಜಾಗೆ ಸಿಕ್ಕಿದ್ದು ತೀರಾ ಕಡಿಮೆ. ಈ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲ ಭಾರತೀಯ ಸಂಗೀತ ನಿರ್ದೇಶಕ ಇಳಯರಾಜಾ.
ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡು ರಾಯಲ್ಟಿ ನೀಡದ ಆಡಿಯೋ ಲೇಬಲ್‌ಗಳ ವಿರುದ್ಧ ಇಳಯರಾಜಾ 2014 ರಿಂದಲೇ ಕಾನೂನು ಹೋರಾಟ ಆರಂಭಿಸಿದರು. ಮದ್ರಾಸ್ ಹೈಕೋರ್ಟ್ ಇವರ ಪರವಾಗಿ ತಡೆಯಾಜ್ಞೆ ನೀಡಿತು. ಒಪ್ಪಂದದ ಅವಧಿ ಮುಗಿದರೂ ತನ್ನ ಸಂಗೀತ ಬಳಸಿದ್ದಕ್ಕಾಗಿ ‘ಎಜಿ ಮ್ಯೂಸಿಕ್’ ಸಂಸ್ಥೆಯಿಂದ ಕೋಟ್ಯಂತರ ರೂಪಾಯಿ ರಾಯಲ್ಟಿ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದರು.
ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು 2017ರಲ್ಲಿ. ತಮ್ಮದೇ ಆಪ್ತ ಸ್ನೇಹಿತರಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ ಮತ್ತು ಎಸ್.ಪಿ. ಚರಣ್ ನಡೆಸುತ್ತಿದ್ದ ಕಾನ್ಸರ್ಟ್ನಲ್ಲಿ ಅನುಮತಿಯಿಲ್ಲದೆ ತಮ್ಮ ಹಾಡುಗಳನ್ನು ಹಾಡಬಾರದೆಂದು ಇಳಯರಾಜಾ ನೋಟಿಸ್ ಕಳುಹಿಸಿದರು. ಇದು ಇಡೀ ಚಿತ್ರರಂಗವನ್ನು ಬೆಚ್ಚಿಬೀಳಿಸಿತು. ಆದರೆ, ತಜ್ಞರ ಪ್ರಕಾರ ಇದು ಗಾಯಕರ ಮೇಲಲ್ಲ, ಕೋಟಿಗಟ್ಟಲೆ ಟಿಕೆಟ್ ಹಣ ಗಳಿಸುವ ದೊಡ್ಡ ಈವೆಂಟ್ ಸಂಘಟಕರ ವಿರುದ್ಧದ ಹೋರಾಟವಾಗಿತ್ತು.
ಇತ್ತೀಚೆಗೆ ‘ಕೂಲಿ’ ಸಿನಿಮಾದ ಟೀಸರ್‌ನಲ್ಲಿ ಅನುಮತಿಯಿಲ್ಲದೆ ತಮ್ಮ ಸಂಗೀತ ಬಳಸಿದ್ದಕ್ಕಾಗಿ ಸನ್ ಪಿಕ್ಚರ್ಸ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ ನೋಟಿಸ್ ನೀಡಿದ್ದರು. ಹಾಗೆಯೇ ಸೂಪರ್ ಹಿಟ್ ಮಲಯಾಳಂ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ ತಂಡದ ಮೇಲೆಯೂ ಇಳಯರಾಜಾ ಹಕ್ಕುಸ್ವಾಮ್ಯದ ಮೊಕದ್ದಮೆ ಹೂಡಿದ್ದರು. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಇವರ ಐದು ಹಾಡುಗಳನ್ನು ಬಳಸಿದ್ದಕ್ಕಾಗಿ ಕೊನೆಗೆ 50 ಲಕ್ಷ ರೂ. ನೀಡಿ ಇವರೊಂದಿಗೆ ರಾಜೀ ಮಾಡಿಕೊಂಡಿತು.
ಆದರೆ, ಎಲ್ಲಾ ತೀರ್ಪುಗಳು ಇವರ ಪರವಾಗಿ ಬರಲಿಲ್ಲ. ದೆಹಲಿ ಹೈಕೋರ್ಟ್ ಇತ್ತೀಚೆಗೆ ‘ಸರೆಗಮ’ ಸಂಸ್ಥೆಯೊಂದಿಗಿನ ವಿವಾದದಲ್ಲಿ ಇಳಯರಾಜಾಗೆ ಹಿನ್ನಡೆ ನೀಡಿತು. 1957ರ ಹಕ್ಕುಸ್ವಾಮ್ಯ ಕಾಯ್ದೆಯ ಪ್ರಕಾರ, ಒಪ್ಪಂದ ಮಾಡಿಕೊಳ್ಳದಿದ್ದರೆ ಸಿನಿಮಾದ ನಿರ್ಮಾಪಕನೇ ಸಂಗೀತದ ಮೊದಲ ಮಾಲೀಕನಾಗುತ್ತಾನೆ.
ಇದನ್ನೂ ಓದಿ: ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ
ಸಿನಿಮಾ ರಂಗದಲ್ಲಿ ಸಂಗೀತಗಾರರ ಹಕ್ಕುಗಳನ್ನು ಕಡೆಗಣಿಸುವುದನ್ನು ಇಳಯರಾಜಾ ಒಪ್ಪಲಿಲ್ಲ. ತಮ್ಮ ಆಪ್ತರನ್ನೇ ಎದುರು ಹಾಕಿಕೊಂಡರೂ, ಹತ್ತು ವರ್ಷಗಳಿಗೂ ಹೆಚ್ಚು ಕಾಲ ಅವರು ನಡೆಸಿದ ಈ ಸತತ ಹೋರಾಟ ಭಾರತೀಯ ಸಂಗೀತ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಳಯರಾಜಾ ಅವರ ಈ ರೋಚಕ ಜೀವನಗಾಥೆಯ ಬಯೋಪಿಕ್ 2024 ರಲ್ಲಿ ಘೋಷಣೆಯಾಗಿದ್ದು, ನಟ ಧನುಷ್ ಇವರ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.