ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ: ಕುದುರುತ್ತಿಲ್ಲ ಡೀಲ್
ಭಾರತೀಯ ಚಿತ್ರರಂಗವು ಹೆಚ್ಚಿದ ನಿರ್ಮಾಣ ವೆಚ್ಚ, ಕಡಿಮೆ ವ್ಯಾಪಾರ ಒಪ್ಪಂದಗಳಿಂದ ಆರ್ಥಿಕ ಸಂಕಷ್ಟದಲ್ಲಿದೆ. ಟೀಸರ್‌ಗಳು ಪ್ರೇಕ್ಷಕರನ್ನು ಸೆಳೆಯದಿದ್ದರೆ, ಒಟಿಟಿ ಮತ್ತು ಥಿಯೇಟ್ರಿಕಲ್ ಹಕ್ಕುಗಳನ್ನು ಮಾರಾಟ ಮಾಡುವುದು ಕಷ್ಟ. 'ರಾಮಾಯಣ'ದಂತಹ ಬೃಹತ್ ಬಜೆಟ್ ಚಿತ್ರಗಳಿಗೂ ಇದು ಅನ್ವಯ. ಪ್ರಚಾರದ ಕಂಟೆಂಟ್ ಮೂಲಕ ಭರವಸೆ ಮೂಡಿಸುವುದು ನಿರ್ಮಾಪಕರ ದೊಡ್ಡ ಸವಾಲು.

ಪ್ರಸ್ತುತ ಭಾರತೀಯ ಚಿತ್ರರಂಗವು ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಹಾಗೂ ವ್ಯಾಪಾರ ಒಪ್ಪಂದಗಳ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹೂಡಿಕೆಯನ್ನು ಮರಳಿ ಪಡೆಯುವುದು ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. ಚಿತ್ರದ ಸ್ಟಾರ್ ನಟರು ಅಥವಾ ಬಜೆಟ್ ಎಷ್ಟು ದೊಡ್ಡದಾಗಿದ್ದರೂ, ಬಿಡುಗಡೆಯಾಗುವ ಟೀಸರ್ ಮತ್ತು ಟ್ರೈಲರ್‌ಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ, ಒಟಿಟಿ ಹಾಗೂ ಥಿಯೇಟ್ರಿಕಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’. ಸುಮಾರು 4000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ, ಸ್ಟಾರ್ ತಾರಾಗಣದೊಂದಿಗೆ ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯ ವೈಭವಕ್ಕೆ ಸದ್ಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬಿಸಿನೆಸ್ ಕುದುರುತ್ತಿಲ್ಲ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಹಿಂದಿ ಥಿಯೇಟ್ರಿಕಲ್ ಹಕ್ಕುಗಳಿಗಾಗಿ ಬರೋಬ್ಬರಿ 450 ಕೋಟಿ ರೂಪಾಯಿ ಮೊತ್ತವನ್ನು ನಿಗದಿಪಡಿಸಿದ್ದಾರೆ. ಇದುವರೆಗೆ ಯಾವುದೇ ಹೈ-ಪ್ರೊಫೈಲ್ ಚಿತ್ರಗಳು ಕೇವಲ 250 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ ವ್ಯವಹಾರ ನಡೆಸಿದ್ದು, ಈ ಹೊಸ ಬೆಲೆ ವಿತರಕರಿಗೆ ಅತಿಯಾಯಿತು ಎನಿಸುತ್ತಿದೆ.
ಈ ಹಿನ್ನಡೆಗೆ ಮುಖ್ಯ ಕಾರಣ, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವುದು. ಟೀಸರ್‌ನಲ್ಲಿನ ಗ್ರಾಫಿಕ್ಸ್ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದು ಪ್ರೇಕ್ಷಕರಲ್ಲಿ ಚಿತ್ರದ ಅಂತಿಮ ಔಟ್‌ಪುಟ್ ಬಗ್ಗೆ ಅನುಮಾನ ಮೂಡಿಸಿದೆ.
ಇದನ್ನೂ ಓದಿ: ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ
ಕೇವಲ ‘ರಾಮಾಯಣ’ ಮಾತ್ರವಲ್ಲದೆ, ಮುಂಬರುವ ಹಲವು ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳ ಪರಿಸ್ಥಿತಿಯೂ ಇದೇ ಆಗಿದೆ. ಆರಂಭಿಕ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ಧನಾತ್ಮಕ ಕ್ರೇಜ್ ಸೃಷ್ಟಿಸದಿದ್ದರೆ, ಒಟಿಟಿ ಸಂಸ್ಥೆಗಳು ಹಾಗೂ ವಿತರಕರು ಅಂತಹ ಸಿನಿಮಾಗಳಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿ, ಪ್ರಚಾರದ ಕಂಟೆಂಟ್ ಮೂಲಕವೇ ಭರವಸೆ ಮೂಡಿಸುವುದು ಇಂದಿನ ನಿರ್ಮಾಪಕರಿಗೆ ಇರುವ ಅತಿ ದೊಡ್ಡ ಸವಾಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:02 am, Fri, 22 May 26





