ಚಿ. ಉದಯಶಂಕರ್ | Chi. Udayashankar: ಸಾಹಿತ್ಯಲೋಕದಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಿದ್ದರೂ ಉದಯಶಂಕರ್ ಅವರ ಒಲವು ಇದ್ದಿದ್ದು ಚಿತ್ರರಂಗದ ಕಡೆಗೇ. ಬಿಡುಗಡೆಯಾದ ಚಿತ್ರಗಳನ್ನೆಲ್ಲಾ ಅವರು ತಪ್ಪದೇ ನೋಡುತ್ತಿದ್ದರು. ನಿರ್ದೇಶಕ ವಿಠಾಲಾಚಾರ್ಯರು “ಕನ್ಯಾದಾನ”ಚಿತ್ರಕ್ಕಾಗಿ ಕಲಾವಿದರು ಬೇಕು ಎಂದು ಜಾಹಿರಾತು ನೀಡಿದಾಗ ಅರ್ಜಿ ಹಾಕಿದ್ದರು. ಸಂದರ್ಶನದಲ್ಲಿ ಇವರನ್ನು ನೋಡಿದ ವಿಠಲಾಚಾರ್ಯರು “ತುಂಬಾ ತೆಳ್ಳಗಿದ್ದಿ, ಸ್ವಲ್ಪ ದಪ್ಪ ಆಗಿ ಬಾ” ಎಂದರು. ಮುಂದೆ ತಂದೆ ಸಂಭಾಷಣೆ ಬರೆದ “ಮಾಯಾ ಬಜಾರ್”ಚಿತ್ರಕ್ಕೆ ವಿಠಲಾಚಾರ್ಯರೇ ನಿರ್ದೇಶಕರು. ಉದಯಶಂಕರ್ ಹಿಂದಿನ ಭೇಟಿ ನೆನಪಿಸಿ ಅವಕಾಶ ಕೇಳಿದರು. ಈಗ ಅವರು ದಪ್ಪಗಾಗಿದ್ದರು… ವಿಠಲಾಚಾರ್ಯರು, “ದಪ್ಪಾ ಅಂದರೆ ಇಷ್ಟು ದಪ್ಪ ಅಲ್ಲಪ್ಪ ಈಗ ನಿನಗೆ ಘಟೋದ್ಗಜನ ಪಾತ್ರ ಕೊಡಲು ಸಾಧ್ಯ” ಎಂದು ಹಾಸ್ಯ ಮಾಡಿದ್ದರು. ಕಲಾವಿದನಾಗುವ ಅದೃಷ್ಟ ಸಿಗಲಿಲ್ಲ ಗಾಯಕನಾಗೋಣ ಎಂದುಕೊಂಡರು.
ಎನ್. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು
*
(ಭಾಗ 2)
ಗಾಯಕನಾಗಲೆಂದೇ ಸಾಹಿತ್ಯ ಪರಿಷತ್‌ನ ಗಮಕ ಕಲಾ ಪರೀಕ್ಷೆ ಕಟ್ಟಿದರು. ಎರಡನೇ ರ‍್ಯಾಂಕ್ ಕೂಡ ಬಂದರು. ಆದರೆ ಗಾಯಕರಾಗಲೂ ಅವಕಾಶ ಸಿಕ್ಕಲಿಲ್ಲ. ಛಾಯಾಗ್ರಾಹಕರಾಗೋಣ ಎಂದುಕೊಂಡು ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮೊ ಮಾಡಿದರು. ಆದರೆ ಕ್ಯಾಮರಾ ಹಿಡಿಯುವ ಅವಕಾಶವೂ ಸಿಕ್ಕಲಿಲ್ಲ. ಸಿನಿಮಾ ಪ್ರವೇಶಿಸುವ ಎಲ್ಲಾ ದಾರಿಗಳೂ ವಿಫಲವಾದ ನಂತರ ಜೀವನೋಪಾಯಕ್ಕೆ ಉದ್ಯೋಗ ಹಿಡಿಯುವುದು ಅನಿವಾರ್ಯವಾಗಿತ್ತು. ಜೀವವಿಮಾ ನಿಗಮದಲ್ಲಿ ಆರು ತಿಂಗಳ ಕಾಲ ಗುಮಾಸ್ತರಾಗಿ ಕೆಲಸ ಮಾಡಿದರು. ನಂತರ ನ್ಯಾಷನಲ್ ಮಿಡ್ಲಸ್ಕೂಲ್‌ನಲ್ಲಿ ಮೇಷ್ಟ್ರ ಕೆಲಸ ಸಿಕ್ಕಿತು. ಅಲ್ಲಿ ನೆಲೆಯೂರುವ ಮುನ್ನವೇ “ಮೊದಲ ತೇದಿ”ಚಿತ್ರದಲ್ಲಿ ಇನ್ಷೂರೆನ್ಸ್ ಏಜೆಂಟನ ಪಾತ್ರ ಸಿಕ್ಕಿತು. ಚಿತ್ರರಂಗದ ಕಡೆ ಆಕರ್ಷಕರಾಗಿದ್ದ ಉದಯಶಂಕರ್ ಅಭಿನಯದ ಅವಕಾಶವನ್ನೇ ಒಪ್ಪಿಕೊಂಡರು. “ಸ್ಕೂಲ್ ಮಾಸ್ಟರ್”ಚಿತ್ರದಲ್ಲಿ ಶಾಸ್ತ್ರಿಗಳ ಪಾತ್ರ, “ಮಹಿಷಾಸುರ ಮರ್ದಿನಿ’’ ಚಿತ್ರದಲ್ಲಿ “ವಿಷ್ಣು”ವಿನ ಪಾತ್ರ ಹೀಗೆ ಚಿಕ್ಕ ಚಿಕ್ಕ ಪಾತ್ರಗಳು ಸಿಕ್ಕುತ್ತಿದ್ದವು. ಜೊತೆಗೆ ಆಗಾಗ ಬರವಣಿಗೆಯ ಅವಕಾಶಗಳು ಸಿಕ್ಕುತ್ತಿದ್ದವು. ಇದನ್ನು ಕಂಡ ತಂದೆ “ನೋಡು ಶಂಕ್ರು ಸಾಹಿತ್ಯ, ಅಭಿನಯ ಹೀಗೆ ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಮಾಡುವುದು ಸರಿಯಲ್ಲ. ಯಾವುದಾದರೂ ಒಂದನ್ನು ಆರಿಸಿಕೋ” ಎಂದರು ಉದಯಶಂಕರ್ ಸಾಹಿತ್ಯವೇ ನನ್ನ ಆಯ್ಕೆ ಎಂದರು.
ಇದನ್ನೂ ಓದಿ : Chennaveera Kanavi Death: ‘ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ’
ಸದಾಶಿವಯ್ಯನವರು ಮಗ ಆಸೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿರ್ಮಾಪಕ ಭಾವನಾರಾಯಣರಿಗೆ ಮಗನ ಆಸೆ ಹೇಳಿದರು. ಅವರು “ಒಂದು ಸ್ಕ್ರಿಪ್ಟ್ ಬರಿ ನೋಡೋಣ” ಎಂದು ರೂ. 116 ರೂಪಾಯಿಗಳಿಗೆ ಚೆಕ್ ನೀಡಿದರು. ಉದಯ ಶಂಕರ್ ಹಗಲು ರಾತ್ರಿ ಕುಳಿತು “ಸತ್ಯ ಹರಿಶ್ಚಂದ್ರ” ಚಿತ್ರದ ಸ್ಕ್ರಿಪ್ಟ್ ಬರೆದರು. ಆದರೆ ಚಿತ್ರ ಸೆಟ್ ಏರಲೇ ಇಲ್ಲ. ಇನ್ನೊಬ್ಬ ಪರಿಚತರ ಬಳಿ ಅವಕಾಶ ಕೇಳಿದಾಗ “ಸ್ನೇಹ ಬೇರೆ ವೃತ್ತಿ ಬೇರೆ” ಎಂದು ಕಡ್ಡಿ ತುಂಡಾಗುವಂತೆ ಹೇಳಿದರು. ಮರುದಿನ “ಮಹಿಷಾಸುರ ಮರ್ದಿನಿ” ಚಿತ್ರದ ಸೆಟ್‌ನಲ್ಲಿ ಮಂಕಾಗಿದ್ದ ಉದಯಶಂಕರ್ ಅವರನ್ನು ರಾಜ್ಕುಮಾರ್ ಕಾರಣ ಕೇಳಿದರು. ಮೊದಲು ಹಿಂಜರಿದರೂ ವಿಷಯ ತಿಳಿಸಿದಾಗ ರಾಜ್ಕುಮಾರ್ ಬೆನ್ನು ತಟ್ಟಿ “ನಿನ್ನಲ್ಲಿ ಪ್ರತಿಭೆ ಇದೆ, ಇಂದಲ್ಲ ನಾಳೆ ಹೊರಬರುತ್ತದೆ. ನೀನು ನನಗಿಂತಲೂ ಬ್ಯೂಸಿಯಾಗುತ್ತಿ” ಎಂದರು. ಮುಂದೆ ಆ ದಿನಗಳೂ ಬಂದವು. “ಅದಕ್ಕೆ ರಾಜ್ಕುಮಾರ್ ಅವರೇ ಕಾರಣರಾದರು” ಎಂದು ಉದಯಶಂಕರ್ ನೆನಪಿಸಿಕೊಳ್ಳುತ್ತಿದ್ದರು.
“ಸಂತ ತುಕಾರಾಂ” ಚಿತ್ರೀಕರಣದಲ್ಲಿ ಸೆಟ್‌ನಲ್ಲಿಯೇ ಸಂಭಾಷಣೆ ಬರೆಯ ಬೇಕಾಗಿತ್ತು. ಆಗ ರಾಜ್ ಕುಮಾರ್ ಉದಯಶಂಕರ್ ಹೆಸರು ಸೂಚಿಸಿದರು. ಈ ಜವಾಬ್ದಾರಿಯನ್ನು ಉದಯಶಂಕರ್ ಯಶಸ್ವಿಯಾಗಿ ನಿರ್ವಹಿಸಿ ಸಂಭಾಷಣೆಕಾರರು ಎನ್ನಿಸಿಕೊಂಡರು. “ಅನ್ನಪೂರ್ಣ”ಚಿತ್ರದಲ್ಲಿ ಹಾಡುಗಳನ್ನು ಬರೆಯುವ ಅವಕಾಶ ಸಿಕ್ಕಿತು. ಇಲ್ಲಿಂದ ಮುಂದೆ ಉದಯಶಂಕರ್ ಅವರ ವಿಜಯ ಯಾತ್ರೆ ಮುಂದುವರೆಯಿತು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
*
ಭಾಗ 1 : Chi. Udayashankar‘s Birth Anniversary: ಡಾ. ರಾಜಕುಮಾರರ 62 ಸಿನೆಮಾಗಳಿಗೆ ಸಂಭಾಷಣೆ ಬರೆದ ಚಿತ್ರರಂಗದ ಚಿರಂಜೀವಿ