ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾಕ್ಕೆ ಮೊದಲ ಆಯ್ಕೆ ಯಾರು?

Ram Charan Peddi: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಟೀಸರ್​ನಲ್ಲಿ ರಾಮ್ ಚರಣ್ ಹೊಡೆದ ಸಿಕ್ಸ್ ವೈರಲ್ ಆಗಿದೆ. ಆದರೆ ‘ಪೆದ್ದಿ’ ಸಿನಿಮಾದ ಕತೆಯನ್ನು ಬೇರೊಬ್ಬ ಸ್ಟಾರ್ ನಟನಿಗಾಗಿ ಮಾಡಲಾಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ನಿಜವೇ?

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾಕ್ಕೆ ಮೊದಲ ಆಯ್ಕೆ ಯಾರು?
Pddi Ram Charan

Updated on: Apr 22, 2025 | 1:33 PM

‘ಆರ್​ಆರ್​ಆರ್’ (RRR) ಸಿನಿಮಾದಿಂದ ಗ್ಲೋಬಲ್ ಸ್ಟಾರ್ ಎನಿಸಿಕೊಂಡ ರಾಮ್ ಚರಣ್ (Ram Charan), ಆ ನಂತರ ಬಂದ ‘ಗೇಮ್ ಚೇಂಜರ್’ ಸಿನಿಮಾದಿಂದಾಗಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ಫ್ಲಾಪ್ ಆಗಿದ್ದು, ಸ್ವತಃ ನಿರ್ಮಾಪಕರೇ ಸಿನಿಮಾ ಫ್ಲಾಪ್ ಎಂದು ಒಪ್ಪಿಕೊಂಡಿದ್ದಾರೆ. ‘ಆರ್​ಆರ್​ಆರ್’ ಸಿನಿಮಾದ ಬಳಿಕ ರಾಮ್ ಚರಣ್ ನಟಿಸಿದ ಎರಡು ಸಿನಿಮಾಗಳು ಫ್ಲಾಪ್ ಆಗಿದ್ದು, ಇದೀಗ ಮೂರನೇ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದು, ಸಿನಿಮಾ ನಿರೀಕ್ಷೆ ಮೂಡಿಸಿದೆ.

ರಾಮ್ ಚರಣ್ ಇದೀಗ ‘ಪೆದ್ದಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಕತೆ ರಾಮ್ ಚರಣ್​ಗಾಗಿ ಬರೆದಿದ್ದಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಬುಚ್ಚಿಬಾಬು ಸನಾ ಸ್ಪಷ್ಟನೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಬುಚ್ಚಿಬಾಬು ಸನಾ, ‘ನಾನು ‘ಪೆದ್ದಿ’ ಸಿನಿಮಾದ ಕತೆ ಮೊದಲಿಗೆ ನಿರ್ದೇಶಕ ಸುಕುಮಾರ್ ಅವರಿಗೆ ಹೇಳಿದೆ. ಅವರಿಗೆ ಕತೆ ಬಹಳ ಇಷ್ಟವಾಯ್ತು. ಆ ಕತೆಯನ್ನು ರಾಮ್ ಚರಣ್​ಗೆ ಹೇಳುವಂತೆ ಹೇಳಿ ಅವರೇ ಮೀಟಿಂಗ್ ಫಿಕ್ಸ್ ಮಾಡಿಸಿದರು. ಅದಾದ ಬಳಿಕ ನಾನು ರಾಮ್ ಚರಣ್ ಅವರಿಗೆ ಕತೆ ಹೇಳಿದೆ. ಅವರಿಗೆ ಕತೆ ಬಹಳ ಇಷ್ಟವಾಯ್ತು ಹೀಗೆ ‘ಪೆದ್ದಿ’ ಸಿನಿಮಾ ಶುರುವಾಯ್ತು’ ಎಂದಿದ್ದಾರೆ ಬುಚ್ಚಿಬಾಬು ಸನಾ.

ಇದನ್ನೂ ಓದಿ:ರಾಮ್ ಚರಣ್ ಪ್ರಯಾಣದ ಸಂಗಾತಿ ಉಪಾಸನಾ ಮಾತ್ರ ಅಲ್ಲ…

ಬುಚ್ಚಿಬಾಬು ಸನಾ ಮೊದಲಿಗೆ ‘ಉಪ್ಪೆನ’ ಸಿನಿಮಾ ಮಾಡಿದ್ದರು. ಆ ಸಿನಿಮಾದ ಬಳಿಕ ಸನಾ ಅವರು ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ರಾಮ್ ಚರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಹೀಗೊಂದು ಸುದ್ದಿ ಹರಿದಾಡುತ್ತಿದೆ. ಜೂ ಎನ್​ಟಿಆರ್​ಗಾಗಿ ಮಾಡಿದ್ದ ಕತೆಯಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದು ನಿಜವಲ್ಲ ಎಂದು ಸ್ವತಃ ಬುಚ್ಚಿಬಾಬು ಸನಾ ಹೇಳಿದ್ದಾರೆ. ಅಲ್ಲದೆ, ಜೂ ಎನ್​ಟಿಆರ್ ಜೊತೆಗೆ ತಾವು ಮಾಡಬೇಕಿದ್ದ ಸಿನಿಮಾ ಅನಿವಾರ್ಯವಾಗಿ ನಿಂತು ಹೋಗಿದೆ ಎಂದು ಸಹ ಸನಾ ಹೇಳಿದ್ದಾರೆ.

‘ಪೆದ್ದಿ’ ಸಿನಿಮಾದ ಟೀಸರ್ ಬಿಡುಗಡೆ ದಿನದ ಬಗ್ಗೆ ಮಾತನಾಡಿರುವ ಬುಚ್ಚಿಬಾಬು ಸನಾ, ಟೀಸರ್ ಬಿಡುಗಡೆ ಆದಾಗ ನಾನು ರಾಮ್ ಚರಣ್ ಅವರ ಮನೆಯಲ್ಲಿಯೇ ಇದ್ದೆ. ರಾಮ್ ಚರಣ್ ಅವರು ತಮ್ಮ ಹೋಮ್ ಥಿಯೇಟರ್​ನಲ್ಲಿ ಫುಲ್ ಸೌಂಡ್ ಕೊಟ್ಟು ಟೀಸರ್ ಅನ್ನು ಪ್ಲೇ ಮಾಡಿದರು. ಆ ಸಮಯದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹ ಇದ್ದರು. ಟೀಸರ್ ನೋಡಿದ ಚಿರಂಜೀವಿ ಬಹಳ ಖುಷಿ ಪಟ್ಟರು. ಆ ದಿನ ನನ್ನ ಪಾಲಿಗೆ ನೆನಪುಳಿವ ದಿನ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ