ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಕೇಸ್ ವಿಚಾರಣೆ ಶುರು; ಬರಲಿದೆ ಮಹತ್ವದ ತೀರ್ಪು
ಜಾಮೀನು ಪಡೆದು ಹೊರಗೆ ಬಂದಿರುವ ದರ್ಶನ್ ಅವರಿಗೆ ಈಗ ಮತ್ತೆ ಢವಢವ ಶುರುವಾಗಿದೆ. ಅವರ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಏ.22) ನಡೆಯುತ್ತಿದೆ. ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಮೇಲೆ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ.

ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದಲ್ಲಿ 2ನೇ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ (Darshan) ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ಇಂದು (ಏಪ್ರಿಲ್ 22) ಆರಂಭ ಆಗಿದೆ. ಸುಪ್ರೀಂ ಕೋರ್ಟ್ (Supreme Court) ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ನ್ಯಾ. ಜೆ.ಬಿ. ಪರ್ದಿವಾಲಾ ಹಾಗೂ ನ್ಯಾ ಮಹದೇವನ್ ಅವರಿರುವ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರು ವಾದ ಮಾಡುತ್ತಿದ್ದಾರೆ.
ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆಯಾ? ಆರೋಪಿ ದರ್ಶನ್ ಏನು ರಾಜಕಾರಣಿಯಾ ಎಂದು ಜಡ್ಜ್ ಪ್ರಶ್ನೆ ಕೇಳಿದ್ದಾರೆ. ‘ಎಲ್ಲರಿಗೂ ಜಾಮೀನು ಸಿಕ್ಕಿದೆ. ಆರೋಪಿ ದರ್ಶನ್ ರಾಜಕಾರಣಿಯಲ್ಲ, ಜನಪ್ರಿಯ ನಟ’ ಎಂದು ವಕೀಲ ಸಿದ್ದಾರ್ಥ್ ಲೂಥ್ರಾ ಅವರು ಉತ್ತರಿಸಿದ್ದಾರೆ. ಹತ್ಯೆಯ ತೀವ್ರತೆ ಹೇಗಿತ್ತು ಎಂಬುದನ್ನು ಜಡ್ಜ್ ಮುಂದೆ ಸಿದ್ದಾರ್ಥ್ ಲೂಥ್ರಾ ವಿವರಿಸಿದ್ದಾರೆ.
ಎಲೆಕ್ಟ್ರಾನಿಕ್ ಎವಿಡೆನ್ಸ್ ಇದೆ. ಪವಿತ್ರಾ ಗೌಡ ಮಾಡಿರುವ ಮೆಸೇಜ್ಗಳು ಇವೆ. ಸಿಸಿಟಿವಿ ದೃಶ್ಯಗಳು ಕೂಡ ಸಿಕ್ಕಿವೆ ಎಂದು ಸಿದ್ದಾರ್ಥ್ ಲೂಥ್ರಾ ಹೇಳಿದ್ದಾರೆ. ಪೋಸ್ಟ್ ಮಾರ್ಟಮ್ ವರದಿ ಕೊಡಿ ಎಂದು ಜಡ್ಜ್ ಕೇಳಿದ್ದಾರೆ. ‘ದೇಹವನ್ನು ಪ್ರಾಣಿಗಳು ತಿಂದಿವೆ. ಮೂಳೆಗಳು ಮುರಿದಿವೆ. ರಕ್ತ ಸುರಿದಿದೆ. ಮರ್ಮಾಂಗಕ್ಕೆ ಗಾಯಗಳಾಗಿವೆ. ದೇಹದ ಪ್ರಮುಖ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ವಿದ್ಯುತ್ ಶಾಕ್ ನೀಡಲಾಗಿದೆ’ ಎಂದು ಹತ್ಯೆಯ ಕ್ರೂರತೆಯನ್ನು ಸರಕಾರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ವಿವರಿಸಿದ್ದಾರೆ.
ಆರೋಪಿ ದರ್ಶನ್ ಈಗಲೂ ಸಾಕ್ಷಿಗಳ ಜೊತೆ ಒಡನಾಟ ಹೊಂದಿದ್ದಾರೆ ಎಂದು ಸಿದ್ದಾರ್ಥ್ ಲೂಥ್ರಾ ಹೇಳಿದ್ದಾರೆ. ದರ್ಶನ್ಗೆ ಮದುವೆ ಆಗಿದೆಯೇ? ಪವಿತ್ರಾ ಗೌಡ ದರ್ಶನ್ ಪತ್ನಿಯೇ ಎಂದು ಜಡ್ಜ್ ಕೇಳಿದ್ದಾರೆ. ‘ಪವಿತ್ರಾ ಗೌಡ ಪತ್ನಿ ಅಲ್ಲ, ಪರಸ್ತ್ರೀ’ ಎಂದು ಸಿದ್ದಾರ್ಥ್ ಲೂಥ್ರಾ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?
ದರ್ಶನ್ ಅವರು ತಮ್ಮ ಪರ ವಾದಕ್ಕೆ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ಮೊರೆ ಹೋಗಿದ್ದಾರೆ. ‘ದರ್ಶನ್ ಹತ್ಯೆ ಮಾಡಿರುವುದಕ್ಕೆ ಸಾಕ್ಷ್ಯಗಳಿಲ್ಲ. ಮೂರು ಸೆಕೆಂಡ್ ವಿಡಿಯೋ ಇದೆ ಎನ್ನುತ್ತಿದ್ದಾರೆ. ಅದರಲ್ಲಿ ಏನು ಗೊತ್ತಾಗುತ್ತೆ? ಅದನ್ನು ಹೇಗೆ ಸಾಕ್ಷ್ಯ ಎಂದು ಪರಿಗಣಿಸಲಾಗುತ್ತೆ? ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆಯದೇ ದರ್ಶನ್ ಅವರನ್ನು ಬಂಧಿಸಲಾಗಿದೆ. ಬಂಧಿಸಿದ ಬಳಿಕ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ’ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.