ಅರ್ಮಾನ್ ಮಲಿಕ್ ಸುಮಧುರ ಕಂಠದಲ್ಲಿ ‘ದೂರ ತೀರ ಯಾನ’ ಚಿತ್ರದ ಮೆಲೋಡಿ ಸಾಂಗ್
‘ದೂರ ತೀರ ಯಾನ’ ಸಿನಿಮಾದ ‘ಇದೇನಿದು ಸೂಚನೆ...’ ಹಾಡು ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಮೂಡಿಬಂದಿದೆ. ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಮಂಸೋರೆ ನಿರ್ದೇಶಿಸಿದ್ದಾರೆ. ಬಕ್ಕೇಶ್ ಮತ್ತು ಕಾರ್ತಿಕ್ ಅವರು ‘ದೂರ ತೀರ ಯಾನ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಖ್ಯಾತ ಗಾಯಕ ಅರ್ಮಾನ್ ಮಲಿಕ್ (Armaan Malik) ಅವರ ಕಂಠದಲ್ಲಿ ಬಂದ ಹಲವು ಗೀತೆಗಳು ಸೂಪರ್ ಹಿಟ್ ಆಗಿವೆ. ಕನ್ನಡದಲ್ಲಿ ಕೂಡ ಅವರು ಹಲವಾರು ಸುಮಧುರ ಹಾಡುಗಳನ್ನು ಹಾಡಿದ್ದಾರೆ. ಅವುಗಳ ಸಾಲಿಗೆ ಈಗ ಇನ್ನೊಂದು ಮೆಲೋಡಿ ಸಾಂಗ್ ಸೇರ್ಪಡೆ ಆಗಿದೆ. ಹೌದು, ‘ದೂರ ತೀರ ಯಾನ’ (Doora Theera Yaana) ಸಿನಿಮಾದ ಪ್ರೇಮಗೀತೆಗೆ ಅರ್ಮಾನ್ ಮಲಿಕ್ ಅವರು ಧ್ವನಿ ನೀಡಿದ್ದಾರೆ. ಇತ್ತೀಚೆಗಷ್ಟೇ ಈ ಹಾಡು ಬಿಡುಗಡೆ ಆಯಿತು. ಮಂಸೋರೆ (Mansore) ನಿರ್ದೇಶನ ಮಾಡಿದ ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ‘ಇದೇನಿದು ಸೂಚನೆ…’ ಹಾಡಿನ ಮೂಲಕ ‘ದೂರ ತೀರ ಯಾನ’ ಚಿತ್ರದ ಮೇಲಿಮ ನಿರೀಕ್ಷೆ ಹೆಚ್ಚಾಗಿದೆ.
‘ದೂರ ತೀರ ಯಾನ’ ಸಿನಿಮಾದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ‘ಡಿ ಕ್ರಿಯೇಶನ್ಸ್’ ನಿರ್ಮಾಣ ಸಂಸ್ಥೆಯ ಮೂಲಕ ಆರ್. ದೇವರಾಜ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಿಂದ ಮೊದಲ ಲವ್ ಸಾಂಗ್ ರಿಲೀಸ್ ಆಗಿದ್ದು, ‘ಎಂಆರ್ಟಿ ಮ್ಯೂಸಿಕ್’ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ಮೆಲೋಡಿಪ್ರಿಯರು ಈ ಹಾಡು ಕೇಳಿ ಮೆಚ್ಚಿಕೊಂಡಿದ್ದಾರೆ.
‘ಇದೇನಿದು ಸೂಚನೆ..’ ಹಾಡಿಗೆ ಖ್ಯಾತ ಗೀತರಚನಾಕಾರ ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಬಕ್ಕೇಶ್ ಮತ್ತು ಕಾರ್ತಿಕ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಮೂಡಿಬಂದ ಈ ಹಾಡಿನ ಲಿರಿಕಲ್ ವಿಡಿಯೋ ಇಲ್ಲಿದೆ:
ಮಂಸೋರೆ ಅವರು ‘ದೂರ ತೀರ ಯಾನ’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚೇತನಾ ತೀರ್ಥಹಳ್ಳಿ ಅವರು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ, ಕಿರಣ್ ಕಾವೇರಪ್ಪ, ಕವಿರಾಜ್ ಅವರು ಹಾಡುಗಳನ್ನು ಬರೆದಿದ್ದಾರೆ. ಚಿತ್ರದ ಟೈಟಲ್ ಸಾಂಗ್ ಬಿಡುಗಡೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರೇಕ್ಷಕರಿಂದಲೇ ಸಾಂಗ್ ರಿಲೀಸ್ ಮಾಡಿಸಲು ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ‘ಸುರುಳಿ’ ಕಿರುಚಿತ್ರ ನಿರ್ಮಾಣ ಮಾಡಿದ ಹೇಮಂತ್ ರಾವ್; ಯೂಟ್ಯೂಬ್ನಲ್ಲಿ ಬಿಡುಗಡೆ
ಇದೊಂದು ಜರ್ನಿ ಸಿನಿಮಾ ಆದ್ದರಿಂದ ಬೆಂಗಳೂರು, ಕುಂದಾಪುರ, ಉಡುಪಿ, ಗೋಕರ್ಣ, ಕಾರವಾರ, ಮುರುಡೇಶ್ವರ, ಯಲ್ಲಾಪುರ, ಗೋವಾ, ದಾಂಡೇಲಿ ಮುಂತಾದ ಕಡೆಗಳಲ್ಲಿ ಒಟ್ಟು 40 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಜುಲೈ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ದೇವರಾಜ್ ಹೇಳಿದ್ದಾರೆ. ನಾಗೇಂದ್ರ ಕೆ. ಉಜ್ಜನಿ ಅವರು ಸಂಕಲನ ಮಾಡುತ್ತಿದ್ದಾರೆ. ಸರವಣ ಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.