ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾಗೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಕಚೇರಿ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ (IT Raid) ಮಾಡಿದ್ದರು. ಸತತ 5 ದಿನಗಳ ಕಾಲ ಶೋಧಕಾರ್ಯ ಮಾಡಲಾಗಿದೆ. ಟಾಲಿವುಡ್ನಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ನವೀನ್ ಅವರಿಗೆ ಸಂಬಂಧಿಸಿದ ಹಲವು ಖಾತೆಗಳನ್ನು ಪರಿಶೀಲನೆ ಮಾಡಲಾಗಿದೆ. ನಿರ್ಮಾಣ ಸಂಸ್ಥೆಯ ಎಲ್ಲ ಲೆಕ್ಕಪತ್ರಗಳನ್ನೂ ತಾಳೆ ಹಾಕಲಾಗಿದೆ. ಈಗ ಐಟಿ ಅಧಿಕಾರಿಗಳ ಕಾರ್ಯಾಚರಣೆ ಮುಕ್ತಾಯ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ (Mythri Movie Makers) ಕಡೆಯಿಂದ ಯಾವುದೇ ಹಣಕಾಸು ಅವ್ಯವಹಾರ ನಡೆದ ಬಗ್ಗೆ ದಾಖಲೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
2015ರಿಂದಲೂ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಮಹೇಶ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್, ರಾಮ್ ಚರಣ್, ವಿಜಯ್ ದೇವರಕೊಂಡ, ‘ಮೆಗಾಸ್ಟಾರ್’ ಚಿರಂಜೀವಿ, ಬಾಲಯ್ಯ ಮುಂತಾದ ಸ್ಟಾರ್ ಕಲಾವಿದರ ಸಿನಿಮಾಗಳಿಗೆ ಈ ಸಂಸ್ಥೆ ಬಂಡವಾಳ ಹೂಡಿದೆ. ಜಿಎಸ್ಟಿ ವಿಚಾರದಲ್ಲಿ ವಂಚನೆ ಆಗಿದೆ ಎಂಬ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು ಎನ್ನಲಾಗಿದೆ. ಆದರೆ ಆದಾಯ ತೆರಿಗೆ, ಜಿಎಸ್ಟಿ, ಟಿಡಿಎಸ್ ಮುಂತಾದ ಯಾವುದೇ ವಿಚಾರದಲ್ಲೂ ತಪ್ಪು ಲೆಕ್ಕ ನೀಡಿರುವುದು ಕಂಡುಬಂದಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಇದನ್ನೂ ಓದಿ: ಐಟಿ ದಾಳಿ ಬೆನ್ನಲ್ಲೆ ಆಸ್ಪತ್ರೆಗೆ ದಾಖಲಾದ ಪುಷ್ಪ ನಿರ್ಮಾಪಕ
ಶೋಧಕಾರ್ಯದ ಸಂದರ್ಭದಲ್ಲಿ ನಿರ್ಮಾಪಕ ನವೀನ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅಲ್ಲದೇ, ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಹಣಕಾಸು ಖಾತೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಎಲ್ಲ ಆಯಾಮದಿಂದಲೂ ಪರಿಶೀಲನೆ ಮಾಡಲಾಗಿದ್ದು, ಯಾವುದೇ ಅಕ್ರಮ ನಡೆದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Pushpa 2: ಮತ್ತೊಂದು ಹಂತದ ಶೂಟಿಂಗ್ಗೆ ಮೈ ಕೊಡವಿ ನಿಂತ ಅಲ್ಲು ಅರ್ಜುನ್; ಇಲ್ಲಿದೆ ‘ಪುಷ್ಪ 2’ ಅಪ್ಡೇಟ್
‘ಮೈತ್ರಿ ಮೂವೀ ಮೇಕರ್ಸ್’ ಮೂಲಕ ‘ಪುಷ್ಪ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಪುಷ್ಪ’ ಚಿತ್ರ ಸೂಪರ್ ಹಿಟ್ ಆಗಿದ್ದರಿಂದ ಈಗ ಅದರ ಸೀಕ್ವೆಲ್ ಮೇಲೆ ಭರ್ಜರಿ ನಿರೀಕ್ಷೆ ಇದೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ದೇಶಕ ಸುಕುಮಾರ್ ಅವರು ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ನಿರ್ಮಾಪಕರು ಬಹುಕೋಟಿ ರೂಪಾಯಿ ರೂಪಾಯಿ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಫಸ್ಟ್ ಗ್ಲಿಂಪ್ಸ್ನಿಂದ ‘ಪುಷ್ಪ 2’ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Mon, 24 April 23