‘ಕನ್ನಡಿಗರಿಗೆ ಫ್ರಂಟ್​ ಡೆಸ್ಕ್​ ಉದ್ಯೋಗ ನೀಡಬೇಕು’: ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಒತ್ತಾಯಿಸಿದ ಜಗ್ಗೇಶ್

|

Updated on: Dec 04, 2023 | 6:26 PM

‘ಭಾಷೆಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸಬಾರದು ಎಂಬುದನ್ನು ನಾವು ಈ ಸಂಸ್ಥೆಗಳಿಂದ ನಿರೀಕ್ಷಿಸುತ್ತೇವೆ. ಇದು ಕೇವಲ ಕರ್ನಾಟಕ ರಾಜ್ಯದ ವಿಚಾರವಲ್ಲ. ಪ್ರತಿ ರಾಜ್ಯಗಳಲ್ಲೂ ಫ್ರಂಟ್​ ಡೆಸ್ಕ್​ ಉದ್ಯೋಗಗಳನ್ನು ಸ್ಥಳೀಯ ಭಾಷೆ ತಿಳಿದಿರುವ ಜನರಿಗೆ ಮೀಸಲಿಡಬೇಕು’ ಎಂದು ಜಗ್ಗೇಶ್​ ಹೇಳಿದ್ದಾರೆ.

‘ಕನ್ನಡಿಗರಿಗೆ ಫ್ರಂಟ್​ ಡೆಸ್ಕ್​ ಉದ್ಯೋಗ ನೀಡಬೇಕು’: ರಾಜ್ಯಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಒತ್ತಾಯಿಸಿದ ಜಗ್ಗೇಶ್
ಜಗ್ಗೇಶ್​
Follow us on

ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ (Jaggesh) ಅವರು ಕನ್ನಡದ ಬಗ್ಗೆ ಸದಾ ಕಾಲ ಧ್ವನಿ ಎತ್ತುತ್ತಾರೆ. ಈಗ ಅವರು ರಾಜ್ಯಸಭೆ (Rajya Sabha) ಅಧಿವೇಷನದಲ್ಲಿ ಕನ್ನಡಿಗರ ಉದ್ಯೋಗದ ಬಗ್ಗೆ ಮನವಿ ಮಾಡಿದ್ದಾರೆ. ‘ಫ್ರಂಟ್​ ಡೆಸ್ಕ್​ ಉದ್ಯೋಗಗಳಿಗೆ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕಕ್ಕೆ ಬೇಡಿಕೆ’ ಎಂದು ಜಗ್ಗೇಶ್​ ಅವರು ಮಾತು ಆರಂಭಿಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಮುಂಬೆಂಚಿನ ಉದ್ಯೋಗ ಕರ್ನಾಟಕದಲ್ಲಿ ಕನ್ನಡಿಗರಿಗೆ (Kannadigas) ಕಡ್ಡಾಯ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಇಂದು ಒತ್ತಾಯ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಸಿರಿಗನ್ನಡಂ ಬಾಳ್ಗೆ’ ಎಂಬ ಕ್ಯಾಪ್ಷನ್​ನೊಂದಿಗೆ ಇದನ್ನು ಜಗ್ಗೇಶ್ ಪೋಸ್ಟ್​ ಮಾಡಿದ್ದಾರೆ.

‘ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದ ಸರ್ಕಾರ ಯಾವಾಗಲೂ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಆ ಭಾಷೆಗಳು ಬೆಳವಣಿಗೆಗೆ ಬದ್ಧವಾಗಿದೆ. ಹೆಚ್ಚಿನ ಭಾಷೆಗಳನ್ನು ಕಲಿಯಲು ಜನರಿಗೆ ಸಲಹೆ ನೀಡುತ್ತಿದೆ. ನಮ್ಮ ಗೌರವಾನ್ವಿತ ಹಣಕಾಸು ಮಂತ್ರಿಗಳು ಫ್ರಂಟ್​​ ಡೆಸ್ಕ್​ ಕೆಲಸಗಳಿಗೆ ಸ್ಥಳೀಯ ಭಾಷೆ ಮಾತನಾಡುವ ಸಾಕಷ್ಟು ಸಿಬ್ಬಂದಿಯನ್ನು ನೇಮಿಸುವಂತೆ ಬ್ಯಾಂಕ್​ಗಳಿಗೆ ಸೂಚಿಸುತ್ತಿರುವ ನಿರಂತರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

‘ಈ ಪ್ರಯತ್ನಗಳ ಹೊರತಾಗಿಯೂ ಬ್ಯಾಂಕ್​​ಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಎಂಎನ್​ಸಿಗಳು ಕರ್ನಾಟಕದಲ್ಲಿ ಸ್ಥಳೀಯ ಭಾಷೆ ಮಾತನಾಡದ ಜನರನ್ನು ಫ್ರಂಟ್​ ಡೆಸ್ಕ್​ ಕೆಲಸಗಳಿಗೆ ನೇಮಿಸಿಕೊಳ್ಳುವುದು ಮುಂದುವರಿಸಿವೆ. ಸ್ಥಳೀಯ ಜನರು ಮುಂಭಾಗದ ಮೇಜಿನ ಸಿಬ್ಬಂದಿಯೊಂದಿಗೆ ಸಂವಹನ ನಡೆಸುವುದು ತುಂಬಾ ಕಷ್ಟ. ಕೆಲವೊಮ್ಮೆ ಅವರು ತಮ್ಮ ಸ್ಥಳೀಯ ಭೂಮಿಯಲ್ಲಿ ಹೊರಗಿನವರು ಎಂದು ಭಾವಿಸುತ್ತಾರೆ. ಇಂತಹ ಸಣ್ಣ ಸಮಸ್ಯೆಗಳು ಕೆಲವೊಮ್ಮೆ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಉಂಟು ಮಾಡುತ್ತವೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಜಗ್ಗೇಶ್​ಗೆ ರಿಲೀಫ್ ನೀಡಿದ ಹೈಕೋರ್ಟ್​

‘ವೈವಿಧ್ಯತೆಯ ಸೂಕ್ಷ್ಮ ವಿಷಯಗಳಿಗೆ ಬಂದಾಗ ಈ ಸಂಸ್ಥೆಗಳು ಹೆಚ್ಚು ಜಾಗರೂಕರಾಗಬೇಕು. ಆದ್ದರಿಂದ ವಿವಿಧತೆಯಲ್ಲಿ ಏಕತೆ ಎಂಬ ಮನೋಭಾವ ಎಲ್ಲರೂ ಗೌರವಿಸಬೇಕು. ಬೇರೆ ರಾಜ್ಯಗಳ ಜನರನ್ನು ನೇಮಿಸಿಕೊಳ್ಳಲು ನಾವು ಈ ಸಂಸ್ಥೆಗಳನ್ನು ವಿರೋಧಿಸುವುದಿಲ್ಲ. ಅವರು ಹಾಗೆ ಮಾಡಲು ಸ್ವತಂತ್ರರು. ಕರ್ನಾಟಕದ ಜನರು ಬಹಳ ವಿಶಾಲ ಮನಸ್ಸಿನವರು. ಇತರ ರಾಜ್ಯಗಳ ಎಲ್ಲ ಜನರನ್ನು ಹೃದಯದಿಂದ ಸ್ವಾಗತಿಸುತ್ತಾರೆ. ಯಾವಾಗಲೂ ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಕನ್ನಡಿಗರು ಯಾವಾಗಲೂ ತಮ್ಮ ಭಾಷೆಯನ್ನು ಹೊರಗಿನವರ ಮೇಲೆ ಬಲವಂತಪಡಿಸುವುದಿಲ್ಲ. ಬದಲಿಗೆ, ನಾವು ಯಾವಾಗಲೂ ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆ. ಬೆಂಗಳೂರಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಕನಿಷ್ಠ 5 ಭಾಷೆಗಳನ್ನು ತಿಳಿದಿರುವುದು ಇದೇ ಕಾರಣಕ್ಕೆ. ಕನ್ನಡವನ್ನು ಹೊರತುಪಡಿಸಿ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್​ ಮಾತನಾಡುತ್ತೇವೆ’ ಎಂದಿದ್ದಾರೆ ಜಗ್ಗೇಶ್​.

ಇದನ್ನೂ ಓದಿ: ನಟರು ಬಂದು ಭಾಷಣ ಮಾಡಿದರೆ ಕಾವೇರಿ ಹರಿಸುವುದು ನಿಲ್ಲಿಸುತ್ತಾರಾ? ಜಗ್ಗೇಶ್ ಪ್ರಶ್ನೆ

‘ಭಾಷೆಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸಬಾರದು ಎಂಬುದನ್ನು ನಾವು ಈ ಸಂಸ್ಥೆಗಳಿಂದ ನಿರೀಕ್ಷಿಸುತ್ತೇವೆ. ಇದು ಕೇವಲ ಕರ್ನಾಟಕ ರಾಜ್ಯದ ವಿಚಾರವಲ್ಲ. ಪ್ರತಿ ರಾಜ್ಯಗಳಲ್ಲೂ ಫ್ರಂಟ್​​ ಡೆಸ್ಕ್​ ಉದ್ಯೋಗಗಳನ್ನು ಸ್ಥಳೀಯ ಭಾಷೆ ತಿಳಿದಿರುವ ಜನರಿಗೆ ಮೀಸಲಿಡಬೇಕು. ಆದ್ದರಿಂದ ಈ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಇರುವ ಎಲ್ಲ ಶಾಖೆಗಳಲ್ಲಿ ರಾಜ್ಯ ಸರ್ಕಾರಗಳ ನಿಯಂತ್ರಣವನ್ನು ಹೊರತುಪಡಿಸಿ ಫ್ರಂಟ್​ ಡೆಸ್ಕ್​ ಉದ್ಯೋಗಗಳಿಗೆ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿಗಳನ್ನು ನೇಮಿಸಬೇಕು’ ಎಂದು ಜಗ್ಗೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.