ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ಮೊದಲ ದಿನ 100 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಲ್ಲಿ ಮುಗ್ಗರಿಸಿದೆ. ಗುರುವಾರ ವಿಶ್ವಾದ್ಯಂತ ಒಟ್ಟು 78.27 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಈ ಚಿತ್ರಕ್ಕೆ ಪೈರಸಿ ಮತ್ತು ಸೋಶಿಯಲ್ ಮೀಡಿಯಾದ ನೆಗೆಟಿವ್ ಹೈಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಚಿತ್ರ ಸಾಕಷ್ಟು ಚಾಲೆಂಜ್​​ಗಳು ಎದುರಿಸಲಿದೆ.

ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
ಜನ ನಾಯಗನ್

Updated on: Jul 24, 2026 | 7:27 AM

ಮುಖ್ಯಾಂಶಗಳು

  • ‘ಜನ ನಾಯಗನ್’ ಕಲೆಕ್ಷನ್‌ಗೆ ಪೈರಸಿ ಪೆಟ್ಟು
  • ತಮಿಳು ನಾಡಿನಲ್ಲೇ ಭರ್ಜರಿ ಕಲೆಕ್ಷನ್
  • ನೆಟ್ ಗಳಿಕೆಯಲ್ಲಿ ತಮಿಳು ಆವೃತ್ತಿಯದ್ದೇ ಸಿಂಹಪಾಲು

ಸಾಕಷ್ಟು ಹೈಪ್ ಸೃಷ್ಟಿಸಿದ್ದ ‘ಜನ ನಾಯಗನ್’ ಸಿನಿಮಾ (Jana Nayagan Movie) ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತಿಲ್ಲ. ಬಿಡುಗಡೆಗೂ ಮುನ್ನ ಸಿನಿಮಾ ವಿಶ್ವಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡು, ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ನೆಗೆಟಿವ್ ವಿಮರ್ಶೆಗಳು ವ್ಯಕ್ತವಾಗಿರುವುದು ಚಿತ್ರದ ಗಳಿಕೆಗೆ ದೊಡ್ಡ ಹೊಡೆತ ನೀಡಿದೆ. ಪರಿಣಾಮವಾಗಿ, ಚಿತ್ರದ ಮೊದಲ ದಿನದ ವಿಶ್ವದಾದ್ಯಂತದ ಒಟ್ಟು ಗಳಿಕೆ ಕೇವಲ 78.27 ಕೋಟಿ ರೂಪಾಯಿ ಆಗಿದೆ.

ಮೊದಲ ದಿನವಾದ ಗುರುವಾರದಂದು ಭಾರತದಾದ್ಯಂತ ಭರ್ಜರಿ 13,067 ಶೋ ಪ್ರದರ್ಶನ ಕಂಡ ಈ ಚಿತ್ರವು, ಶೇಕಡಾ 41.6 ರಷ್ಟು ಥಿಯೇಟರ್ ಆಕ್ಯುಪೆನ್ಸಿ ದಾಖಲಿಸಿದೆ. ಇದರೊಂದಿಗೆ ಭಾರತದಲ್ಲಿ ಕೇವಲ 41.00 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡುವಲ್ಲಿ ಮಾತ್ರ ಸಿನಿಮಾ ಯಶಸ್ವಿಯಾಗಿದೆ. ಇದರಲ್ಲಿ ಹೆಚ್ಚಿನ ಪಾಲು (36.50 ಕೋಟಿ ರೂಪಾಯಿ) ತಮಿಳಿನಿಂದ ಬಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ 48.27 ಕೋಟಿ ರೂಪಾಯಿ ತಲುಪಿದೆ ಎಂದು sacnilk ವರದಿ ಮಾಡಿದೆ.

ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ್ದು, ಒಟ್ಟು 30.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತ ಹಾಗೂ ಸಾಗರೋತ್ತರ ಗಳಿಕೆ ಎರಡನ್ನೂ ಸೇರಿಸಿ ಚಿತ್ರವು ವಿಶ್ವಾದ್ಯಂತ ಒಟ್ಟಾರೆಯಾಗಿ 78.27 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಪಡೆದುಕೊಂಡಿದೆ. ಮೊದಲ ದಿನವೇ ನೆಗೆಟಿವ್ ಟಾಕ್ ಸಿಕ್ಕಿರುವುದರಿಂದ, ಮುಂಬರುವ ವೀಕೆಂಡ್ ದಿನಗಳಲ್ಲಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಚೇತರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ

‘ಜನ ನಾಯಗನ್’ ಸಿನಿಮಾ ಬಿಡುಗಡೆಯಾಗುವ ಮೊದಲೇ ಲೀಕ್ ಆಗಿದೆ. ಇದು ಗಳಿಕೆ ಕುಗ್ಗಲು ಮುಖ್ಯ ಕಾರಣ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಸುತ್ತ ಎದ್ದಿರುವ ಈ ನೆಗೆಟಿವ್ ಹೈಪ್, ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us