
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 9 ರಂದು ಬಿಡುಗಡೆ ಆಗಲಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮಾತ್ರವೇ ಸಿನಿಮಾ ಬಿಡುಗಡೆ ಆಗುತ್ತಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಲಾಗಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳಾಗಿದ್ದು, ಕೊಚ್ಚಿಯಲ್ಲಿ ಇತ್ತೀಚೆಗಷ್ಟೆ ಓಪನ್ ಆಗಿದೆ. ಆದರೆ ಬೆಂಗಳೂರಿನ ಟಿಕೆಟ್ ದರಕ್ಕೂ, ಕೊಚ್ಚಿಯ ಟಿಕೆಟ್ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಅಡ್ವಾನ್ಸ್ ಬುಕಿಂಗ್ ಮಾತ್ರವೇ ಓಪನ್ ಆಗಿದೆ. ಜನವರಿ 09ರ ಮುಂಜಾನೆ 6 ಗಂಟೆಯ ವಿಶೇಷ ಶೋ ಟಿಕೆಟ್ಗಳನ್ನಷ್ಟೆ ಬುಕ್ ಮಾಡಲು ಅವಕಾಶ ಇದೆ. ಈ ಶೋಗಳಿಗೆ ಭಾರಿ ಮೊತ್ತದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಪ್ರತಿ ಟಿಕೆಟ್ಗೆ 800 ಮತ್ತು 1000 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಟಿಕೆಟ್ಟಿಗೆ 800 ರೂಪಾಯಿ, ಬಾಲ್ಕನಿಗೆ 1000 ಬೆಲೆ ಇದೆ. ಕೆಲ ಚಿತ್ರಮಂದಿರಗಳಲ್ಲಿ ಈ ಬೆಲೆ 1000 ಮತ್ತು 1200 ಸಹ ಇದೆ.
ಆದರೆ ಕೇರಳದ ಕೊಚ್ಚಿಯಲ್ಲಿ ಬೇರೆಯದ್ದೇ ಕತೆ ಇದೆ. ಕೇರಳದಲ್ಲಿಯೂ ಬೆಳಿಗ್ಗೆ 6 ಗಂಟೆ ಶೋ ಆಯೋಜನೆ ಮಾಡಲಾಗಿದೆ. ಆದರೆ ಆ ವಿಶೇಷ ಶೋ ಟಿಕೆಟ್ನ ಪ್ರಾರಂಭಿಕ ಬೆಲೆ ಕೇವಲ 120 ರೂಪಾಯಿಗಳಿವೆ. ಕೆಲವು ಚಿತ್ರಮಂದಿರಗಳಲ್ಲಿ ಆರಂಭಿಕ ಬೆಲೆ 190 ರೂಪಾಯಿಗಳಿವೆ. ಗರಿಷ್ಟ ಬೆಲೆ 350 ರೂಪಾಯಿಗಳಷ್ಟೆ. ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ‘ಜನ ನಾಯಗನ್’ ಸಿನಿಮಾ ಟಿಕೆಟ್ಟುಗಳನ್ನು ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ?
ಕೇರಳದ ಕೊಚ್ಚಿಯಲ್ಲಿ ವಿಶೇಷ ಶೋನ ಟಿಕೆಟ್ಗೆ ಹೆಚ್ಚು ಬೆಲೆ ಸಾಮಾನ್ಯ ಶೋಗೆ ಕಡಿಮೆ ಬೆಲೆ ಎಂಬ ವ್ಯತ್ಯಾಸವಿಲ್ಲ. ಯಾವುದೇ ಶೋನ ಟಿಕೆಟ್ ಖರೀದಿ ಮಾಡಿದರು ಒಂದೇ ಟಿಕೆಟ್ ಬೆಲೆ ಇದೆ. ಆದರೆ ಬೆಂಗಳೂರಿನಲ್ಲಿ ವಿಶೇಷ ಶೋಗೆ 1000 ರೂಪಾಯಿ ನೀಡಬೇಕಿದೆ. ಇದು ಅನ್ಯಾಯ ಅಲ್ಲದೆ ಮತ್ತೇನು ಎಂಬ ಪ್ರಶ್ನೆ ಬೆಂಗಳೂರಿನ ಸಿನಿಮಾ ಪ್ರೇಮಿಗಳದ್ದು.
‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಪ್ರಸ್ತುತ ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ಮಾತ್ರವೇ ಓಪನ್ ಆಗಿದೆ. ಹೈದರಾಬಾದ್, ಚೆನ್ನೈ ಮತ್ತು ಮುಂಬೈನಲ್ಲಿ ಇನ್ನಷ್ಟೆ ಓಪನ್ ಆಗಬೇಕಿದೆ. ಆದರೆ ಅಲ್ಲಿಯೂ ಸಹ ಟಿಕೆಟ್ ದರಗಳು ಕಡಿಮೆಯೇ ಇರಲಿವೆ. ಆದರೆ ‘ಜನ ನಾಯಗನ್’ ನಿರ್ಮಾಪಕರು ಮತ್ತು ವಿತರಕರು ಹಣ ದೋಚಿಕೊಳ್ಳಲು ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನೇ ಗುರಿ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ