‘ಜನ ನಾಯಗನ್’ ಲೀಕ್ ಬೆನ್ನಲ್ಲೇ ಕಠಿಣ ಕ್ರಮ: ಸೈಬರ್ ಕ್ರೈಂ ಪೊಲೀಸರಿಂದ 6 ಜನರ ಬಂಧನ
ರಿಲೀಸ್ ಆಗುವುದಕ್ಕೂ ಮೊದಲೇ ‘ಜನ ನಾಯಗನ್’ ಸಿನಿಮಾ ಲೀಕ್ ಆಗಿದ್ದು ಅನೇಕರು ಡೌನ್‌ಲೋಡ್ ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪೈರಸಿ ಕೃತ್ಯದಲ್ಲಿ ಯಾರೂ ಕೂಡ ಭಾಗಿಯಾಗಬಾರದು ಎಂದು ಚಿತ್ರತಂಡ ಖಡಕ್ ಎಚ್ಚರಿಕೆ ನೀಡಿದೆ. ಆ ಕುರಿತು ಇಲ್ಲಿದೆ ಮಾಹಿತಿ..

ಕಾಲಿವುಡ್ ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾಗೆ ಪೈರಸಿ ಕಾಟ ಎದುರಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾವನ್ನು ಲೀಕ್ ಮಾಡಲಾಗಿದೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸರು ಈಗಾಗಲೇ ಆರು ಜನರನ್ನು ಬಂಧಿಸಿದ್ದಾರೆ. ಈ ಚಿತ್ರವನ್ನು ಪ್ರತಿಷ್ಠಿತ ಕೆವಿಎನ್ (KVN) ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಸಿನಿಮಾ ಲೀಕ್ ಆಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಸ್ಥೆಯ ಪರವಾಗಿ ಕಾನೂನು ಸಲಹೆಗಾರರಾದ ವಿಜಯನ್ ಸುಬ್ರಹ್ಮಣ್ಯಂ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
‘ಜನ ನಾಯಗನ್ ಚಿತ್ರದ ದೃಶ್ಯಗಳನ್ನು ಕಾನೂನುಬಾಹಿರವಾಗಿ ಹಂಚಿಕೊಂಡ ಆರೋಪದ ಮೇಲೆ ಸೈಬರ್ ಕ್ರೈಂ ಪೊಲೀಸರು ಈಗಾಗಲೇ 6 ಜನರನ್ನು ಬಂಧಿಸಿದ್ದಾರೆ. ಇನ್ನು ಮುಂದೆ ಯಾರಾದರೂ ಈ ಲೀಕ್ ಆದ ದೃಶ್ಯಗಳನ್ನು ಡೌನ್‌ಲೋಡ್ ಮಾಡುವುದು, ಫಾರ್ವರ್ಡ್ ಮಾಡುವುದು ಅಥವಾ ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಹಂಚಿಕೊಳ್ಳುವುದು ಕಂಡುಬಂದಲ್ಲಿ, ಅವರನ್ನು ಪತ್ತೆಹಚ್ಚಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.
ನಿರ್ಮಾಣ ಸಂಸ್ಥೆಯು ಈಗಾಗಲೇ ಸಾರ್ವಜನಿಕ ನೋಟಿಸ್ ಹೊರಡಿಸಿದ್ದು, ಚಿತ್ರವು ನೂರಾರು ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಸಿದ್ಧವಾಗಿದೆ ಎಂದು ತಿಳಿಸಿದೆ. ಎಚ್. ವಿನೋದ್ ನಿರ್ದೇಶನದ ಮತ್ತು ಅನಿರುದ್ಧ್ ರವಿಚಂದರ್ ಸಂಗೀತವಿರುವ ಈ ಚಿತ್ರವು ಥಿಯೇಟರ್, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮೂಲಕ ಭಾರಿ ಮೌಲ್ಯವನ್ನು ಹೊಂದಿದೆ. ಅಂತಹ ಚಿತ್ರದ ದೃಶ್ಯಗಳನ್ನು ಕಳುವು ಮಾಡಿ ಹಂಚುತ್ತಿರುವುದು ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.
The Cyber Crime Department has already arrested 6 persons in connection with the illegal circulation of leaked content from #Jana Nayagan. Any person downloading, forwarding, sharing or circulating leaked scenes in any form through social media or digital platforms will be traced… https://t.co/bVrxljbZNr
— Vijayan Subramanian (@lawyervijayan) April 12, 2026
ವಾಟ್ಸಾಪ್, ಟೆಲಿಗ್ರಾಮ್, ಎಕ್ಸ್, ಫೇಸ್‌ಬುಕ್ ಅಥವಾ ಯಾವುದೇ ವೆಬ್‌ಸೈಟ್‌ಗಳಲ್ಲಿ ಸೋರಿಕೆಯಾದ ತುಣುಕುಗಳನ್ನು ಹಂಚುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಯಾವುದೇ ವಿನಾಯಿತಿ ಇಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆ ತಿಳಿಸಿದೆ. ಸಿನಿಮಾ ರಂಗದ ಮೇಲೆ ನಂಬಿಕೆ ಇಟ್ಟು ನೂರಾರು ಕೋಟಿ ಹೂಡಿಕೆ ಮಾಡುವ ನಿರ್ಮಾಪಕರ ಹಿತದೃಷ್ಟಿಯಿಂದ ಪ್ರೇಕ್ಷಕರು ಪೈರಸಿಯನ್ನು ಪ್ರೋತ್ಸಾಹಿಸಬಾರದು ಎಂದು ಚಿತ್ರತಂಡ ಮನವಿ ಮಾಡಿದೆ.
ಇದನ್ನೂ ಓದಿ: ‘ಜನ ನಾಯಗನ್’ ಲೀಕ್ಗೆ ಅವರಿಬ್ಬರೇ ಕಾರಣ: ವಿಜಯ್ ಫ್ಯಾನ್ಸ್ ಆರೋಪ
ವಿಜಯ್ ಅವರು ಶೀಘ್ರದಲ್ಲೇ ರಾಜಕೀಯ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಸಿನಿಮಾ ಲೀಕ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇತ್ತ ಇಡೀ ದಕ್ಷಿಣ ಭಾರತದ ಚಿತ್ರೋದ್ಯಮ ವಿಜಯ್ ಬೆಂಬಲಕ್ಕೆ ನಿಂತಿದೆ. ಮೆಗಾ ಸ್ಟಾರ್ ಚಿರಂಜೀವಿ, ಸೂರ್ಯ, ಶಿವಕಾರ್ತಿಕೇಯನ್, ಖುಷ್ಬೂ ಸುಂದರ್, ಕಾರ್ತಿ, ಜಿ.ವಿ. ಪ್ರಕಾಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಈ ಪೈರಸಿ ಕೃತ್ಯವನ್ನು ಖಂಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




