ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಮಲಯಾಳಂ ಚಿತ್ರರಂಗ ಬೆಳೆಯುತ್ತಿದೆ. ಸಿಂಪಲ್ ಆದ ಮೇಕಿಂಗ್, ಸಣ್ಣ ಬಜೆಟ್ನಲ್ಲಿಯೇ ಅದ್ಭುತವಾದ ಚಿತ್ರಗಳನ್ನು ಕಟ್ಟಿಕೊಡುವಲ್ಲಿ ಮಾಲಿವುಡ್ ನಿರ್ದೇಶಕರು ಯಶಸ್ವಿ ಆಗುತ್ತಿದ್ದಾರೆ. ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್ (Remake) ಆಗುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತಿವೆ. ಅಂಥ ಒಂದು ಚಿತ್ರದ ಮೇಲೆ ಅಲ್ಲು ಅರ್ಜುನ್ (Allu Arjun) ಮತ್ತು ಜಾನ್ ಅಬ್ರಾಹಂ (John Abraham) ಕಣ್ಣಿಟ್ಟಿದ್ದಾರೆ. ಯಾವುದು ಆ ಚಿತ್ರ? ನಾಯಟ್ಟು!
ಪೊಲೀಸ್ ಇಲಾಖೆಗೆ ಸಂಬಂಧಿಸಿದ ರೋಚಕ ಕಥೆಯನ್ನು ಹೊಂದಿರುವ ‘ನಾಯಟ್ಟು’ ಚಿತ್ರ ಈ ವರ್ಷ ಏಪ್ರಿಲ್ನಲ್ಲಿ ಬಿಡುಗಡೆ ಆಗಿತ್ತು. ರಾಜಕೀಯ ಪಿತೂರಿಯ ಕಾರಣದಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ತೊಂದರೆಗೆ ಒಳಗಾಗುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಆ ಚಿತ್ರವನ್ನು ರಿಮೇಕ್ ಮಾಡಲು ಅಲ್ಲು ಅರ್ಜುನ್ ಹಾಗೂ ಜಾನ್ ಅಬ್ರಾಹಂ ಮುಗಿಬಿದ್ದಿದ್ದಾರೆ. ಹಾಗಂತ ಅವರಿಬ್ಬರ ನಡುವೆ ಪೈಪೋಟಿ ಶುರುವಾಗಿಲ್ಲ. ಇಬ್ಬರೂ ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
‘ನಾಯಟ್ಟು’ ಚಿತ್ರವನ್ನು ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ಮಿಸಲಿದ್ದಾರೆ. ಹಿಂದಿಯಲ್ಲಿ ಜಾನ್ ಅಬ್ರಾಹಂ ನಿರ್ಮಿಸಲಿದ್ದಾರೆ. ಇಬ್ಬರೂ ಕೂಡ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ವಿಚಾರವನ್ನು ‘ನಾಯಟ್ಟು’ ನಿರ್ದೇಶಕ ಮಾರ್ಟಿನ್ ಪ್ರಕಟ್ ಬಹಿರಂಗಪಡಿಸಿದ್ದಾರೆ. ಆದರೆ ಅಧಿಕೃತವಾಗಿ ಜಾನ್ ಆಗಲಿ, ಅಲ್ಲು ಅರ್ಜುನ್ ಆಗಲಿ ಏನನ್ನೂ ಬಾಯಿ ಬಿಟ್ಟಿಲ್ಲ. ರಿಮೇಕ್ನಲ್ಲಿ ಯಾವ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಥಿಯೇಟರ್ನಲ್ಲಿ ‘ನಾಯಟ್ಟು’ ಚಿತ್ರ ತೆರೆಕಂಡಾಗ ಕೊರೊನಾ ಹಾವಳಿ ಇತ್ತು. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಕಲೆಕ್ಷನ್ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ನೆಟ್ಫ್ಲಿಕ್ಸ್ ಮೂಲಕ ಬಿಡುಗಡೆ ಮಾಡಲಾಯಿತು. ಅದರಿಂದ ಹೆಚ್ಚು ಜನರನ್ನು ತಲುಪಿತು. ಈಗ ರಿಮೇಕ್ ಆಗುವ ಮೂಲಕ ಇನ್ನಿತರ ಭಾಷೆಯ ಪ್ರೇಕ್ಷಕರನ್ನೂ ಈ ಕಥೆ ಸೆಳೆದುಕೊಳ್ಳಲು ಪ್ರಯತ್ನಿಸಲಿದೆ. ಜಾನ್ ಅಬ್ರಾಹಂ ರಿಮೇಕ್ ಮಾಡುತ್ತಿರುವ ಎರಡನೇ ಮಾಲಿವುಡ್ ಸಿನಿಮಾ ಇದಾಗಿದೆ. ಈ ಮೊದಲು ಅವರು ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ರಿಮೇಕ್ ಹಕ್ಕುಗಳನ್ನು ಕೂಡ ಖರೀದಿಸಿದ್ದು, ಅದರ ಕೆಲಸಗಳು ಪ್ರಗತಿಯಲ್ಲಿವೆ.
ಇದನ್ನೂ ಓದಿ:
ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಅಲ್ಲು ಅರ್ಜುನ್ ಮಗಳು; ಸಮಂತಾ ಜೊತೆ ಅಲ್ಲು ಅರ್ಹಾ ನಟನೆ
ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್ 2; ಯಶ್-ಅಲ್ಲು ಅರ್ಜುನ್ ನಡುವೆ ಭಾರಿ ಪೈಪೋಟಿ
Published On - 11:09 am, Tue, 3 August 21