ಕೊರೊನಾ ಅಲೆಯಿಂದಾಗಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ, ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್ ನಿಲ್ಲಿಸಲಾಗಿದೆ. ಇದರ ಪರಿಣಾಮವಾಗಿ ಬಹುತೇಕ ಧಾರಾವಾಹಿಗಳು ತಾತ್ಕಾಲಿಕವಾಗಿ ನಿಲ್ಲಲಿವೆ. ಮತ್ತೆ ಶೂಟಿಂಗ್ಗೆ ಅವಕಾಶ ಕೊಟ್ಟ ನಂತರವೇ ಧಾರಾವಾಹಿಗಳ ಪ್ರಸಾರ ಮತ್ತೆ ಆರಂಭವಾಗಲಿದೆ. ಹಾಗಾದರೆ, ಕನ್ನಡದ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ ಹೊಸ ಸಂಚಿಕೆಗಳ ಪ್ರಸಾರ ಯಾವಾಗ ಅಂತ್ಯವಾಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮೇ 24ರವರೆಗೆ ಯಾರೊಬ್ಬರೂ ಧಾರಾವಾಹಿ/ ರಿಯಾಲಿಟಿ ಶೋ ಶೂಟಿಂಗ್ ಮಾಡುವಂತಿಲ್ಲ ಎಂದು ಟೆಲಿವಿಷನ್ ಅಸೋಸಿಯೇಷನ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಒಂದೊಮ್ಮೆ ಈ ಆದೇಶ ಮೀರಿದರೆ ಶಿಕ್ಷೆ ನೀಡುವ ಎಚ್ಚರಿಕೆ ಕೂಡ ನೀಡಲಾಗಿದೆ. ಹೀಗಾಗಿ, ಬಿಗ್ ಬಾಸ್ ರಿಯಾಲಿಟಿ ಶೋ ಅರ್ಧಕ್ಕೆ ನಿಂತಿದೆ. ಧಾರಾವಾಹಿಗಳ ಚಿತ್ರೀಕರಣ ಕೂಡ ಸ್ಥಗಿತಗೊಂಡಿದೆ. ಇದಕ್ಕೆ ಜೊತೆಜೊತೆಯಲಿ ಧಾರಾವಾಹಿ ಕೂಡ ಹೊರತಾಗಿಲ್ಲ.
ಜೊತೆ ಜೊತೆಯಲಿ ಧಾರಾವಾಹಿ ಇನ್ನೆಷ್ಟು ದಿನ ಪ್ರಸಾರವಾಗಲಿದೆ ಎನ್ನುವ ಬಗ್ಗೆ ನಟ ಅನಿರುದ್ಧ್ ಮಾಹಿತಿ ನೀಡಿದ್ದಾರೆ. ‘ಈ ಲಾಕ್ಡೌನ್ ಮುಗಿಯುವವರೆಗೆ ಸಾಕಾಗುವಷ್ಟು ಸಂಚಿಕೆಗಳ ಬ್ಯಾಂಕಿಂಗ್ ನಮ್ಮಲ್ಲಿದೆ. ಲಾಕ್ಡೌನ್ ಮುಂದುವರಿದರೆ ಎಪಿಸೋಡ್ಗಳ ಬ್ಯಾಂಕಿಂಗ್ ಇಲ್ಲ. ನಂತರ ಏನು ಮಾಡೋದೋ ಗೊತ್ತಿಲ್ಲ. ವಾಹಿನಿಯವರು ನಂತರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಬಹುಶಃ ಮರುಪ್ರಸಾರ ಮಾಡಬಹುದು’ ಎಂದಿದ್ದಾರೆ ಅವರು.
‘ಧಾರಾವಾಹಿಗಳನ್ನು ಒಂದು ತಿಂಗಳಿಗೆ ಸಾಕಾಗುವಷ್ಟು ಬ್ಯಾಂಕಿಂಗ್ ಇಡೋಕೆ ಸಾಧ್ಯವಿಲ್ಲ. ಒಂದು ದಿನದಲ್ಲಿ ಎಷ್ಟು ಕೆಲಸ ಮಾಡೋಕೆ ಸಾಧ್ಯವೋ ಅಷ್ಟು ಮಾಡಲು ಸಾಧ್ಯ. ಧಾರಾವಾಹಿಗೆ ಬರವಣಿಗೆ ಬೇಕು. ಅವರಿಗೂ ಪ್ರೆಷರ್ ಆಗುತ್ತೆ. ಕೆಲವೊಮ್ಮೆ ಕೊನೆಯ ಸಮಯದಲ್ಲಿ ಡೈಲಾಗ್ ಕಳಿಸುತ್ತಾರೆ. ಹೀಗಾಗಿ, ಇದರಲ್ಲಿ ಅರ್ಜನ್ಸಿ ಮಾಡೋಕೆ ಆಗಲ್ಲ. ನಾವು ಅರ್ಜೆಂಟ್ ಮಾಡಿದರೆ ಕ್ವಾಲಿಟಿ ನಿರ್ವಹಣೆ ಮಾಡೋಕೆ ಆಗಲ್ಲ’ ಎಂದಿದ್ದಾರೆ ಅವರು.
ಕೊರೊನಾ ಮೊದಲನೇ ಅಲೆ ಕಾಣಿಸಿಕೊಂಡಾಗ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆಗಲೂ ಧಾರಾವಾಹಿಗಳಿಗೆ ಇದೇ ತೊಂದರೆ ಉಂಟಾಗಿತ್ತು. ಕೆಲ ಧಾರಾವಾಹಿಗಳನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇನ್ನೂ ಕೆಲ ಧಾರಾವಾಹಿ ತಂಡಗಳು, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರದಲ್ಲಿ ಶೂಟಿಂಗ್ ಆರಂಭಿಸಿದ್ದವು.
ಇದನ್ನೂ ಓದಿ: ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ