ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾದಲ್ಲಿ ಜೂ.ಎನ್ಟಿಆರ್: ಈ ಬಾರಿ ತಮಿಳು ಸ್ಟಾರ್ ಜೊತೆ
ಆರ್ಆರ್ಆರ್ ಮೂಲಕ ನಟಿಸಿದ ಮೊದಲ ಮಲ್ಟಿಸ್ಟಾರರ್ ಸಿನಿಮಾದಲ್ಲಿಯೇ ಹಿಟ್ ನೀಡಿರುವ ನಟ ಜೂ.ಎನ್ಟಿಆರ್ ಇದೀಗ ತಮ್ಮ ಎರಡನೇ ಮಲ್ಟಿಸ್ಟಾರರ್ ಸಿನಿಮಾಕ್ಕಾಗಿ ತಯಾರಾಗುತ್ತಿದ್ದಾರೆ! ಯಾರ ಜೊತೆ?

ಆರ್ಆರ್ಆರ್ (RRR) ಮೂಲಕ ನಟಿಸಿದ ಮೊದಲ ಮಲ್ಟಿಸ್ಟಾರರ್ ಸಿನಿಮಾದಲ್ಲಿಯೇ ದೊಡ್ಡ ಗೆಲುವು ಸಂಪಾದಿಸಿದ್ದಾರೆ ನಟ ಜೂ.ಎನ್ಟಿಆರ್. ತಮ್ಮ ನಟನೆಯ ಸಿನಿಮಾದ ಹಾಡಿಗೆ ಆಸ್ಕರ್ ಬರುವ ಖುಷಿಯಲ್ಲಿರುವ ಜೂ.ಎನ್ಟಿಆರ್ (Jr NTR) ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದು, ಆಸ್ಕರ್ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯಲಿದ್ದಾರೆ. ಇದರ ನಡುವೆ ಜೂ ಎನ್ಟಿಆರ್ರ ಮುಂಬರುವ ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ನಟ ಜೂ.ಎನ್ಟಿಆರ್ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿದೆ. ಆದರೆ ಈ ಬಾರಿ ಅವರೊಟ್ಟಿಗೆ ತೆರೆ ಹಂಚಿಕೊಳ್ಳಲಿರುವುದು ರಾಮ್ ಚರಣ್ ಅಲ್ಲ, ತೆಲುಗಿನ ಇನ್ಯಾವುದೇ ನಟರೂ ಅಲ್ಲ ಬದಲಿಗೆ ತಮಿಳಿನ ಸ್ಟಾರ್ ನಟ!
ತಮಿಳಿನ ಸ್ಟಾರ್ ನಟ ಧನುಶ್ ಅವರ ಹೊಸ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದು ವಿಶೇಷವೆಂದರೆ ಹೀರೋಯಿಸಂ ಸಿನಿಮಾಗಳನ್ನು ಮಾಡದ, ನೈಜತೆಗೆ ಹೆಚ್ಚು ಒತ್ತು ನೀಡುವ, ನಿಜ ಘಟನೆಗಳನ್ನು ತೆರೆಗೆ ತರುವ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿರುವುದು.
ಧನುಶ್ಗಾಗಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿರುವ ವೆಟ್ರಿಮಾರನ್ ಹೊಸದೊಂದು ಸಿನಿಮಾ ನಿರ್ದೇಶನ ಮಾಡಲಿದ್ದು ಆ ಸಿನಿಮಾದಲ್ಲಿ ನಟ ಧನುಶ್ ಜೊತೆಗೆ ಜೂ ಎನ್ಟಿಆರ್ ಸಹ ಮುಖ್ಯ ಪಾತ್ರದಲ್ಲಿರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಸಹೋದರ ತಾರಕ್ ರತ್ನ ಹಠಾತ್ ನಿಧನದಿಂದಾಗಿ ಕೆಲ ಸಮಯ ಸಿನಿಮಾಗಳಿಂದ ದೂರ ಉಳಿದಿದ್ದ ನಟ ಜೂ ಎನ್ಟಿಆರ್, ಅಮೆರಿಕದಲ್ಲಿ ಆರ್ಆರ್ಆರ್ ಸಿನಿಮಾ ಮರುಬಿಡುಗಡೆಯ ಪ್ರಚಾರಕ್ಕೂ ಹೋಗಿರಲಿಲ್ಲ. ಇದೀಗ ಸಹೋದರನ ಸಾವಿನ ನೋವಿನಿಂದ ತುಸು ಚೇತರಿಸಿಕೊಂಡಿರುವ ಜೂ ಎನ್ಟಿಆರ್ ಅಮೆರಿಕಕ್ಕೆ ತೆರಳಿದ್ದು, ಆಸ್ಕರ್ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಜೂ ಎನ್ಟಿಆರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಾಯಕಿ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇನ್ನು ನಟ ಧನಂಜಯ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದ್ದಾರೆ. ಕ್ಯಾಪ್ಟನ್ ಮಿಲ್ಲರ್, ರಯಾನ್ ಸಿನಿಮಾಗಳಲ್ಲಿ ಧನುಶ್ ನಟಿಸುತ್ತಿದ್ದು ಅದರ ಜೊತೆಗೆ ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Wed, 8 March 23




